ಕ್ರೀಡೆದೇಶಪ್ರಮುಖ ಸುದ್ದಿ

ವಿದೇಶಿ ತಂಡದ ಪರ ಆಡುವ ಶ್ರೀಶಾಂತ್ ಕನಸು ಭಗ್ನ; ಮತ್ತೊಂದು ರಾಷ್ಟ್ರದ ಪರ ಕ್ರಿಕೆಟ್ ಆಡುವಂತಿಲ್ಲ: ಬಿಸಿಸಿಐ

ನವದೆಹಲಿ,ಅ.21-ಐಪಿಎಲ್ ಸ್ಪಾಟ್ ಫಿಕ್ಸಿಂಗ್ ‍ಪ್ರಕರಣದಲ್ಲಿ ಬಿಸಿಸಿಐ ನಿಂದ ಕ್ರಿಕೆಟ್ ನಿಂದ ಆಜೀವ ನಿಷೇಧಕ್ಕೆ ಒಳಗಾಗಿರುವ ಕೇರಳದ ವೇಗಿ ಎಸ್.ಶ್ರೀಶಾಂತ್ ಯಾವುದೇ ದೇಶದ ತಂಡವನ್ನೂ ಪ್ರತಿನಿಧಿಸುವಂತಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.

ತಾನು ಮತ್ತೊಂದು ದೇಶದ ಪರವಾಗಿ ಆಡಬಹುದು ಎಂದು ಶ್ರೀಶಾಂತ್ ನೀಡಿದ್ದ ಹೇಳಿಕೆ ಪ್ರತಿಕ್ರಿಯಿಸಿರುವ ಬಿಸಿಸಿಐ, ಆಜೀವ ನಿಷೇಧಕ್ಕೆ ಒಳಗಾಗಿರುವ ಶ್ರೀಶಾಂತ್ ವಿದೇಶಿ ತಂಡದ ಪರವಾಗಿಯೂ ಕ್ರಿಕೆಟ್ ಆಡುವಂತಿಲ್ಲ ಎಂದಿದೆ. ಇದರಿಂದ ವಿದೇಶಿ ತಂಡದ ಪರ ಆಡುವ ಶ್ರೀಶಾಂತ್ ಕನಸು ಭಗ್ನವಾಗಿದೆ.

ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿ.ಕೆ.ಖನ್ನಾ ಮಾಧ್ಯಮದೊಂದಿಗೆ ಮಾತನಾಡಿ, ಐಸಿಸಿ ನಿಮಯದ ಪ್ರಕಾರ, ಯಾವುದೇ ಆಟಗಾರನೂ ತನ್ನ ಮಾತೃ ಸಂಸ್ಥೆಯಿಂದ ನಿಷೇಧಕ್ಕೊಳಗಾದರೆ ವಿದೇಶೀ ತಂಡವನ್ನು ಪ್ರತಿನಿಧಿಸುವ ಅವಕಾಶವಿಲ್ಲ. ಇದು ಶ್ರೀಶಾಂತ್ ಗೂ ಅನ್ವಯವಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

2013ರಲ್ಲಿ ನಡೆದಿದ್ದ ಐಪಿಎಲ್ ಟೂರ್ನಿಯಲ್ಲಿ ಸ್ಪಾಟ್ ಫಿಕ್ಸಿಂಗ್ ಆರೋಪಕ್ಕೆ ತುತ್ತಾಗಿದ್ದ ಕ್ರಿಕೆಟಿಗ ಶ್ರೀಶಾಂತ್ ಮೇಲೆ ಬಿಸಿಸಿಐ ಆಜೀವ ನಿಷೇಧ ಹೇರಿತ್ತು. ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿ 2015ರಲ್ಲಿ ಪಾಟಿಯಾಲ ಕೋರ್ಟ್ ಶ್ರೀಶಾಂತ್, ಅಂಕಿತ್ ಚೌಹ್ವಾಣ್, ಅಜಿತ್ ಚಾಂಡೀಲಾ ಮೇಲಿನ ನಿಷೇಧವನ್ನು ತೆರವುಗೊಳಿಸಿತ್ತು. ಆದರೆ ಎರಡು ದಿನಗಳ ಹಿಂದಷ್ಟೇ ಕೇರಳ ಹೈಕೋರ್ಟ್ ವಿಭಾಗೀಯ ಪೀಠ ಶ್ರೀಶಾಂತ್ ಮೇಲಿನ ಆಜೀವ ನಿಷೇಧ ತೆರವಿಗೆ ತಡೆಯೊಡ್ಡಿ ಬಿಸಿಸಿಐ ನಿರ್ಧಾರವನ್ನು ಸಮರ್ಥಿಸಿಕೊಂಡಿತ್ತು. (ವರದಿ-ಎಂ.ಎನ್)

Leave a Reply

comments

Related Articles

error: