ಮೈಸೂರು

ಮಾತೃಭಾಷೆಯಲ್ಲಿ ಕಲಿತ ಮಕ್ಕಳು ಎಲ್ಲಿ ಬೇಕಾದರೂ ಬದುಕಬಲ್ಲರು : ಕೆ.ಪುಟ್ಟಯ್ಯ

ನಮ್ಮ ಮಾತೃಭಾಷೆ ಕನ್ನಡದಲ್ಲಿ ಕಲಿತ ಮಕ್ಕಳು ವಿಶ್ವದಲ್ಲಿ ಎಲ್ಲಿ ಬೇಕಾದರೂ ಬದುಕುವ ಸಾಮರ್ಥ್ಯ ಹೊಂದಿರುತ್ತಾರೆ ಎಂದು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರಗತಿಪರ ರೈತ ಕೆ.ಪುಟ್ಟಯ್ಯ ಹೇಳಿದರು.

ಮೈಸೂರಿನ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಹತ್ತಿರ ಇರುವ ಕನ್ನಡ ಸಾಹಿತ್ಯ ಪರಿಷತ್ ನಗರ ಘಟಕದ ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ನಡೆದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಕೆ.ಪುಟ್ಟಯ್ಯ ಮಾತನಾಡಿದರು.

ಸಭೆ ಸಮಾರಂಭಗಳಲ್ಲಿ ಕನ್ನಡದಲ್ಲಿ ಮಾತನಾಡಬೇಕು ಎಂದು ಹೇಳುತ್ತೇವೆ. ಆದರೆ ಇಂಗ್ಲೀಷ್ ಮಾಧ್ಯಮಗಳ ಶಾಲೆಗೆ ನಾವು ಮಕ್ಕಳನ್ನು ಸೇರಿಸುತ್ತೇವೆ. ಈ ರೀತಿ ಮಾಡುವುದು ಎಷ್ಟು ಸರಿ? ನಮ್ಮ ಮಕ್ಕಳನ್ನು ಕನ್ನಡ ಶಾಲೆಗಳಿಗೇ ಸೇರಿಸಬೇಕು. ಕನ್ನಡ ಭಾಷೆಯಲ್ಲಿ ಕಲಿತ ಮಕ್ಕಳು ಎಲ್ಲಿ ಬೇಕಾದರೂ ಬದುಕಬಲ್ಲ ಬುದ್ಧಿವಂತರಾಗಿರುತ್ತಾರೆ. ಗ್ರಾಮೀಣ ಭಾಗಗಳಲ್ಲಿ ಇನ್ನೂ ಕನ್ನಡ ಉಳಿದುಕೊಂಡಿದೆ. ನಗರಗಳಲ್ಲಿಯೂ ಕನ್ನಡವನ್ನು ಉಳಿಸುವ ಕೆಲಸವಾಗಬೇಕು. ಭಾಷೆಯನ್ನು ಉಳಿಸಲು ಸಗರ ಪ್ರದೇಶದ ಜನತೆ ಮುಂದಾಗಬೇಕು ಎಂದು ತಿಳಿಸಿದರು.

ನಾನು ಒಂದು ಕಾಲದಲ್ಲಿ ಜೀತ ಮಾಡುತ್ತಿದ್ದೆ. ನನಗೆ ಸರ್ಕಾರದಿಂದ ನಾಲ್ಕು ಎಕರೆ ಖುಷ್ಕಿ ಭೂಮಿ ದೊರಕಿತ್ತು. ಅದರಲ್ಲೇ ಕಷ್ಟಪಟ್ಟು ದುಡಿದು ಇಂದು ನಲವತ್ತೈದು ಎಕರೆ ಜಮೀನು ಹೊಂದಿದ್ದೇನೆ. ವರ್ಷಕ್ಕೆ 40ಲಕ್ಷರೂ. ಆದಾಯವಿದೆ. ನಮ್ಮ ಕುಟುಂಬಿಕರು ವಿದ್ಯಾವಂತರಿದ್ದರೂ ಕೃಷಿಯಲ್ಲಿ ತೊಡಗಿಸಿಕೊಂಡಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ರಂಗಕರ್ಮಿ ರಾಮೇಶ್ವರಿ ವರ್ಮಾ, ಸಾಹಿತಿ ಬಿ.ಶಾಮಸುಂದರ್, ರೈತ ಕೆ.ಪುಟ್ಟಯ್ಯ  ಅವರನ್ನು ಸಂಗೀತ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಸರ್ವಮಂಗಳಾ ಶಂಕರ್ ಶಾಲು ಹೊದೆಸಿ, ಫಲಪುಷ್ಪ ಹಾಗೂ ಸ್ಮರಣಿಕೆ ನೀಡಿ ಅಭಿನಂದಿಸಿದರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಗೌರವ ಕಾರ್ಯದರ್ಶಿ ಜಯಪ್ಪ ಹೊನ್ನಾಳಿ, ಕೆ.ಎಸ್.ನಾಗರಾಜು ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: