ಕರ್ನಾಟಕ

ಕುಖ್ಯಾತ ರೌಡಿ ರಾಜದೊರೆ ಬಂಧನ

ರಾಜ್ಯ(ಬೆಂಗಳೂರು)ಅ.21:- ನಗರದ ಸೋಲದೇವನಹಳ್ಳಿಯ ಆಚಾರ್ಯ ಕಾಲೇಜ್ ಬಳಿ ಇಂದು ಬೆಳ್ಳಂಬೆಳಗ್ಗೆ ಸಿಸಿಬಿ ಪೊಲೀಸರು ಗುಂಡು ಹಾರಿಸಿ, ಕುಖ್ಯಾತ ರೌಡಿ ರಾಜದೊರೆ ಎಂಬಾತನನ್ನು ಬಂಧಿಸಿದ್ದಾರೆ.

ಕುಖ್ಯಾತ ರೌಡಿ ಪಳನಿಯ ಸಹಚರನಾಗಿರುವ ರಾಜದೊರೆ ಕೊಲೆ, ಕೊಲೆಯತ್ನ, ದರೋಡೆ ಸೇರಿ 18 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ಬೆಂಗಳೂರಲ್ಲಿ ಕುಕೃತ್ಯ ನಡೆಸಿ ತಮಿಳುನಾಡಿಗೆ ಪರಾರಿಯಾಗಲು ಯತ್ನಿಸುತ್ತಿದ್ದಾಗ ಸಿಸಿಬಿ ಪೊಲೀಸರು ನಾಕಾಬಂಧಿ ನಡೆಸಿ ಆತನ ಕಾಲಿಗೆ ಗುಂಡಿಕ್ಕಿ ವಶಕ್ಕೆ ಪಡೆದಿದ್ದಾರೆ. ರಾಜದೊರೆ ತಮಿಳುನಾಡಿಗೆ ಹೋಗುತ್ತಿರುವ ವಿಷಯ ತಿಳಿದ ಸಿಸಿಬಿ ಎಸಿಪಿ ಮಹದೇವಪ್ಪ ಮತ್ತು ತಂಡ ಕಳೆದ ರಾತ್ರಿ ಆತನನ್ನು ಬಂಧಿಸಲು ಕಾರ್ಯಾಚರಣೆಯ ರೂಪುರೇಷೆ ಸಿದ್ಧಪಡಿಸಿತ್ತು. ಸೋಲದೇವನಹಳ್ಳಿ ಬಳಿ ರಾಜ ಇರುವುದನ್ನು ತಿಳಿದುಕೊಂಡ ಪೊಲೀಸ್ ತಂಡ, ಅಲ್ಲಿಗೆ ತೆರಳಿ ಆತನಿಗೆ ಶರಣಾಗುವಂತೆ ಸೂಚಿಸಿದೆ. ಆದರೆ ಆತ ಅಲ್ಲಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಪೊಲೀಸರ ಮೇಲೆಯೇ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾನೆ. ಮುಖ್ಯಪೇದೆ ನರಸಿಂಹಮೂರ್ತಿ ಎಂಬವರಿಗೆ ಡ್ರ್ಯಾಗರ್‌ನಿಂದ ಇರಿದಿದ್ದಾನೆ. ಇದರಿಂದ ನರಸಿಂಹಮೂರ್ತಿ ಅವರ ಕೈಗೆ ಗಾಯವಾಗಿದೆ. ತಕ್ಷಣ ಎಚ್ಚೆತ್ತುಕೊಂಡ ಇನ್ಸಪೆಕ್ಟರ್ ಪ್ರಕಾಶ್ ರಾಥೋಡ್ ಸ್ವರಕ್ಷಣೆಗಾಗಿ ರಾಜದೊರೆಯ ಕಾಲಿಗೆ ಗುಂಡು ಹಾರಿಸಿದ್ದಾರೆ. ತಕ್ಷಣ ಕುಸಿದುಬಿದ್ದ ಆತನನ್ನು ಇತರ ಸಿಬ್ಬಂದಿ ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: