ಮೈಸೂರು

ಮಕ್ಕಳ ಮಾರಾಟ ಜಾಲ ಪ್ರಕರಣ : ಮತ್ತೆ ಮೂವರ ಬಂಧನ; ಎಂಟು ಮಕ್ಕಳ ರಕ್ಷಣೆ

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದ ಮಕ್ಕಳ ಮಾರಾಟ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಿರುಸಿನ ಕಾರ್ಯಾಚರಣೆ ನಡೆಸಿದ್ದು ಒಟ್ಟು ಎಂಟು ಮಕ್ಕಳನ್ನು ರಕ್ಷಿಸಿ ಮತ್ತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಹಿಂದೆ ಬಂಧಿತ ಆರೋಪಿಗಳು ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ವಿವಿಧೆಡೆ ಕಾರ್ಯಾಚರಣೆ ನಡೆಸಿದ್ದರು. ಇದರಿಂದ ಮತ್ತೆ ಮೂವರು ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಬಂಧಿತರನ್ನು ಪ್ರಾನ್ಸಿಸ್ ಜೊತೆಗಿದ್ದ ಉಮೇಶ್ ಮತ್ತು ಶೋಭ ಹಾಗೂ ಮದನ್ ಎಂದು ಗುರುತಿಸಲಾಗಿದೆ. ಪೊಲೀಸರು ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಮಂಡಿಮೊಹಲ್ಲಾ ದಲ್ಲಿ ಖಾಸಗಿ ನರ್ಸಿಂಗ್ ಹೋಂ ನಡೆಸುತ್ತಿದ್ದ  ಉಷಾ ಮತ್ತವಳ ಪತಿ ಪ್ರಾನ್ಸಿಸ್, ಹಾಗೂ ಕೆ.ಆರ್.ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನರ್ಸ್ ಓರ್ವಳನ್ನು ಈಗಾಗಲೇ ಪೊಲೀಸರು ಬಂಧಿಸಿದ್ದರು. ಪ್ರಕರಣದಲ್ಲಿ ಒಟ್ಟು ಒಂಭತ್ತು ಮಂದಿ ಭಾಗಿಯಾಗಿರುವ ಕುರಿತು ಪೊಲೀಸರಿಗೆ ಮಾಹಿತಿ ದೊರಕಿದೆ ಎಂದು ತಿಳಿದು ಬಂದಿದೆ. ಆರೋಪಿಗಳು 16ಕ್ಕೂ ಅಧಿಕ ಮಕ್ಕಳನ್ನು ಮಾರಾಟ ಮಾಡಿದ್ದರು ಎನ್ನಲಾಗಿದೆ. ಕಾರ್ಯಾಚರಣೆಗೆ ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದು, ಮತ್ತಷ್ಟು ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿ ಉಷಾ ಒಡೆತನದ ಖಾಸಗಿ ನರ್ಸಿಂಗ್ ಹೋಂಗೆ ಪೊಲೀಸರು ಬೀಗ ಜಡಿದಿದ್ದಾರೆ. 2011ರಲ್ಲಿ ನೋಂದಣಿ ಹೊಂದಿದ್ದ ನರ್ಸಿಂಗ್ ಹೋಂ ಮತ್ತೆ ನೋಂದಣಿಯನ್ನು ನವೀಕರಣಗೊಳಿಸಿರಲಿಲ್ಲ ಎನ್ನಲಾಗಿದ್ದು, ಆರೋಗ್ಯ ಇಲಾಖೆಯೂ ಸಹ ನರ್ಸಿಂಗ್ ಹೋಂ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ ಎಂದು ತಿಳಿದುಬಂದಿದೆ.

ಸೋಮವಾರ ರಕ್ಷಿಸಿದ ಮಕ್ಕಳನ್ನು ಮಂಗಳವಾರ ಕಲ್ಯಾಣ ಸಮಿತಿಗೆ ನಿಡುವ ಪ್ರಕ್ರಿಯೆ ನಡೆಯಲಿದೆ.

Leave a Reply

comments

Related Articles

error: