ಕರ್ನಾಟಕ

ದೇಗುಲ ಅಭಿವೃದ್ಧಿ ಕಾಮಗಾರಿ ಆದಷ್ಟು ಬೇಗ ಪೂರ್ಣ : ಶಾಸಕ ಜಯಣ್ಣ ವಿಶ್ವಾಸ 

ರಾಜ್ಯ(ಚಾಮರಾಜನಗರ)ಅ.21:- ಯಳಂದೂರು ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಬಿಳಿಗಿರಿರಂಗನಬೆಟ್ಟದ ದೇಗುಲದ ಅಭಿವೃದ್ಧಿ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಲಾಗುವುದು ಎಂದು ಶಾಸಕ ಎಸ್. ಜಯಣ್ಣ ವಿಶ್ವಾಸ ವ್ಯಕ್ತಪಡಿಸಿದರು.
ಅವರು ದೇಗುಲದ ಜೀರ್ಣೋದ್ಧಾರ ಕಾಮಗಾರಿಯನ್ನು ವೀಕ್ಷಿಸಿ ಮಾತನಾಡಿದರು. ಬಿಳಿಗಿರಿ ರಂಗನಾಥಸ್ವಾಮಿ ದೇಗುಲವು ಇಡೀ ಜಿಲ್ಲೆಯಲ್ಲೇ ಪ್ರಸಿದ್ಧಿ ಪಡೆದಿದೆ. ಇಲ್ಲಿಗೆ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಶಿಥಿಲಗೊಂಡಿದ್ದ ದೇಗುಲದ ಅಭಿವೃದ್ಧಿಗೆ ಕ್ರಮ ವಹಿಸಲಾಗಿದೆ. ಈಗಾಗಲೇ ದೇಗುಲದ ಮುಖ್ಯ ದ್ವಾರದ ಮಂಟಪದ ಕಾಮಗಾರಿ ಪೂರ್ಣಗೊಂಡಿದೆ. ಬಿಳಿಗಿರಿರಂಗನಾಥ ದೇಗುಲವನ್ನು ಸಂಪೂರ್ಣ ತೆರವುಗೊಳಿಸಿ ಮತ್ತೆ ಕಲ್ಲುಗಳನ್ನು ಜೋಡಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಇದಾದ ನಂತರ ಅಮ್ಮನವರ ದೇಗುಲದ ಕಲ್ಲುಗಳನ್ನು ತೆರವುಗೊಳಿಸುವ ಕಾರ್ಯ ನಡೆಯಲಿದೆ. ಈಗಾಗಲೇ ಮುಜರಾಯಿ ಇಲಾಖೆಯ ವತಿಯಿಂದ 2.40 ಲಕ್ಷ ರೂ. ಹಣ ಬಿಡುಗಡೆಯಾಗಿದೆ. ಈ ಕಾಮಗಾರಿ ಸಂಪೂರ್ಣಗೊಂಡ ಮೇಲೆ ನಿರ್ಮಾಣಗೊಂಡಿರುವ ರಾಜಗೋಪುರದ ಮುಂದೆ ಹೊಸದಾಗಿ ಮೆಟ್ಟಿಲುಗಳನ್ನು ನಿರ್ಮಿಸಲು ಕ್ರಮ ವಹಿಸಲಾಗುವುದು. ಇದರೊಂದಿಗೆ ದೊಡ್ಡ ರಥದ ನಿರ್ಮಾಣಕ್ಕೂ  99.50 ಲಕ್ಷ ರೂ. ಹಣ ಬಿಡುಗಡೆಯಾಗಿದ್ದು ಇದರ ಕಾಮಗಾರಿಯೂ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ.
ದೊಡ್ಡ ತೇರು ಸಿದ್ಧಗೊಂಡ ಮೇಲೆ ಹೊಸದಾಗಿ ಶೀಟ್‍ಗಳಲ್ಲಿ ಶೆಡ್‍ನ್ನು ನಿರ್ಮಿಸಿ ಇದಕ್ಕೆ ರಕ್ಷಣೆ ನೀಡಲಾಗುವುದು. ಈ ಎಲ್ಲಾ ಕಾಮಗಾರಿಗಳೂ ಪೂರ್ಣಗೊಂಡ ಮೇಲೆ ದೇಗುಲದ ಬಳಿ ಇರುವ ಕಮರಿಯ ಅಭಿವೃದ್ಧಿ ಹಾಗೂ ಹೊಸದಾಗಿ ದಾಸೋಹ ಭವನ ನಿರ್ಮಿಸಲು ಕ್ರಮ ವಹಿಸಲಾಗುವುದು. ದೇಗುಲದ ಬಳಿಯಲ್ಲೇ ಕುಡಿಯುವ ನೀರಿನ ಓವರ್‍ಹೆಡ್ ಟ್ಯಾಂಕ್ ನಿರ್ಮಿಸಲು ಜಾಗ ಗುರುತಿಸಿದ್ದು ಆದಷ್ಟು ಬೇಗ ಕಾಮಗಾರಿ ಆರಂಭಿಸಲಾಗುವುದು. ಇದೂ ಸೇರಿದಂತೆ ಇನ್ನಿತರ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಂಡು ಈ ಕ್ಷೇತ್ರವನ್ನು ರಾಜ್ಯದ ಆಕರ್ಷಣೀಯ ಪ್ರವಾಸಿ ಕ್ಷೇತ್ರವಾಗಿ ಅಭಿವೃದ್ಧಿ ಪಡಿಸಲು ಕ್ರಮ ವಹಿಸಲಾಗುವುದು ಎಂದರು.
ಜಿಪಂ. ಸದಸ್ಯ ಜೆ. ಯೋಗೇಶ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ವಿ. ಚಂದ್ರು, ಅಹಿಂದ ಜಿಲ್ಲಾಧ್ಯಕ್ಷ ದೊಡ್ಡಯ್ಯ, ದೇಗುಲದ ಕಾರ್ಯನಿರ್ವಹಕ ಅಧಿಕಾರಿ ವೆಂಕಟೇಶ್ ಪ್ರಸಾದ್ ಮುಖಂಡರಾದ ಬೊಮ್ಮಯ್ಯ, ಸೋಮಣ್ಣ, ವೆಂಕಟೇಶ್ ಮತ್ತಿತರರಿದ್ದರು. (ಜಿ.ಎನ್,ಎಸ್.ಎಚ್)

Leave a Reply

comments

Related Articles

error: