ಕರ್ನಾಟಕ

ಹಾಸನದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ನಿವೇಶನ ಹಸ್ತಾಂತರ

ಹಾಸನ, ಅ.23 (ಪ್ರಮುಖ ಸುದ್ದಿ): ಹಾಸನ ನಗರಾಭಿವೃದ್ಧಿ ಪ್ರಾಧಿಕಾರವು ನೂತನವಾಗಿ ನಿರ್ಮಿಸಿರುವ ಎಸ್.ಎಂ.ಕೆ ಬಡಾವಣೆಯ 453 ಎಕರೆ ಪ್ರದೇಶದಲ್ಲಿ 14 ಎಕರೆ ಪ್ರದೇಶವನ್ನು ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಪಶುಸಂಗೋಪನೆ ಮತ್ತು ರೇಷ್ಮೆ ಖಾತೆ ಸಚಿವರಾದ ಎ. ಮಂಜು ಅವರ ಉಪಸ್ಥಿತಿಯಲ್ಲಿ ಹಸ್ತಾಂತರಿಸಲಾಯಿತು.

ನಗರದ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ನಡೆದ ಎಸ್.ಎಂ ಕೃಷ್ಣನಗರ ಬಡಾವಣೆಯಲ್ಲಿ ಕ್ರಿಕೆಟ್ ಕ್ರೀಡಾಂಗಣ ನಿವೇಶನ ಹಸ್ತಾಂತರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು ಜಿಲ್ಲೆಯು ಕ್ರೀಡೆಗೆ ಹೆಚ್ಚು ಹೆಸರುವಾಸಿಯಾಗಿದೆ. ಜಿ ನಗರದಲ್ಲಿ ಕ್ರಿಕೆಟ್ ಕ್ರೀಡಾಂಗಣ ಇರಲಿಲ್ಲ, ಜಿಲ್ಲೆಯಲ್ಲಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣವಾಗುತ್ತಿರುವುದು ಹೆಮ್ಮೆ ತರಲಿದೆ ಎಂದರು.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗಿರುವುದರಿಂದ ಜಿಲ್ಲೆಯ ಹಾಗೂ ಗ್ರಾಮೀಣ ಪ್ರದೇಶದ ಜನರನ್ನು ಗುರುತಿಸುವ ಕಾರ್ಯ ಹಾಗೂ ಪ್ರತಿಭೆಗಳ ಅನಾವರಣಗೊಳ್ಳಲು ಸಹಾಯಕವಾಗಲಿದೆ ಎಂದು ಅವರು ಹೇಳಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಶ್ವೇತ ದೇವರಾಜ್ ಅವರು ಮಾತನಾಡಿ ನಗರಾಭಿವೃದ್ದಿ ಪ್ರಾಧಿಕಾರದಿಂದ ಎಸ್.ಎಂ ಕೃಷ್ಣನಗರ ಬಡಾವಣೆಯಲ್ಲಿ 14 ಎಕರೆ ಪ್ರದೇಶವನ್ನು ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ನಿವೇಶನ ನೀಡಿರುವುದು ತುಂಬಾ ಸಂತೋಷಕರ ವಿಷಯ. ಕ್ರಿಕೆಟ್ ಪಟುಗಳಿಂದ ಜಿಲ್ಲೆಗೆ ಹೆಸರು ತರುವಂತಾಗಲಿ ಎಂದು ಹೇಳಿದರು.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಸಹ ಕಾರ್ಯದರ್ಶಿ ಸಂತೋಷ್ ಮೆನನ್ ಅವರು ಮಾತನಾಡಿ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ ಮಾಡಿ, ವರ್ಷಗಳಲ್ಲಿ ಕ್ರಿಕೆಟ್ ಆಟವನ್ನು ಪ್ರಾರಂಭಿಸಲಾಗುತ್ತದೆ. ಕ್ರೀಡಾಂಗಣದಲ್ಲಿ ವಸತಿ ನಿಲಯ, ಮತ್ತು ಒಳಾಂಗಣ ಕ್ರೀಡಾಂಗಣ ಹಾಗೂ ಮೂಲಭೂತ ಸೌಕರ್ಯಗಳನ್ನು ನಿರ್ಮಾಣ ಮಾಡಲಾಗುತ್ತದೆ ಹಾಗೂ ಹುಬ್ಬಳ್ಳಿ, ಶಿವಮೊಗ್ಗ, ಬೆಳಗಾಂ, ಮೈಸೂರು ಮತ್ತು ಕೋಲಾರದಲ್ಲಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ ಮಾಡಲಾಗಿದೆ ಎಂದು ಅವರು ಹೇಳಿದರು.

ಜಿಲ್ಲಾ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಕೃಷ್ಣಕುಮಾರ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ನಾಯಕರಹಳ್ಳಿ ಮಂಜೇಗೌಡ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಅಧ್ಯಕ್ಷರಾದ ಸಂಜಯ್ ದೇಸಾಯಿ, ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ಸ್ವಾಮಿ, ಕಾರ್ಯದರ್ಶಿಯಾದ ಸುಧಾಕರ್ ರಾವ್, ಖಜಾಂಚಿ ಶ್ರೀನಿವಾಸ್ ಮೂರ್ತಿ, ಅಂತರಾಷ್ಟ್ರೀಯ ಮಾಜಿ ಕ್ರಿಕೆಟ್ ಕ್ರೀಡಾಪಟು ಡೇವಿಡ್ ಜಾನ್ಸನ್, ಮಹಿಳಾ ಕ್ರಿಕೆಟ್ ಆಟಗಾರ್ತಿ ಪದ್ಮರಾವ್ ಮೂರ್ತಿ, ಕರ್ನಾಟಕ ಕ್ರಿಕೆಟ್ ತಂಡದ ನಾಯಕ ವಿನಯ್ ಕುಮಾರ್, ರಣಜಿ ಕ್ರಿಕೆಟ್ ಆಟಗಾರರು, ಅಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

(ಎನ್‍ಬಿಎನ್‍)

Leave a Reply

comments

Related Articles

error: