ಮೈಸೂರು

ಹಿಂದುಳಿದವರನ್ನು ಮುಖ್ಯವಾಹಿನಿಗೆ ತರುವಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ : ಮಹದೇವಪ್ಪ

ಹಿಂದುಳಿದ ವರ್ಗದಲ್ಲೇ ಅತ್ಯಂತ ಹಿಂದುಳಿದವರು ತೆಲುಗು ಶೆಟ್ಟರು ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ . ಹೆಚ್.ಸಿ. ಮಹದೇವಪ್ಪ ತಿಳಿಸಿದರು.

ಸರಸ್ವತಿಪುರಂನ ಕರ್ನಾಟಕ 24 ಮನೆ ತೆಲುಗುಶೆಟ್ಟರ ಸಂಘದಿಂದ ಆಯೋಜಿಸಿದ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನೂತನ ಕಟ್ಟಡದ ಉದ್ಘಾಟನೆಯನ್ನು ಹೆಚ್.ಸಿ.ಮಹದೇವಪ್ಪ ನೆರವೇರಿಸಿದರು.  ಬಳಿಕ ಮಾತನಾಡಿದ ಅವರು ಇತಿಹಾಸವನ್ನು ತೆರದು ನೋಡಿದಾಗ ಚಂಪಕಾ ದೊರೆರಾಜ್ ಅವರಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಸೀಟ್ ನೀಡಬೇಕಾಗಿತ್ತು, ಆದರೆ ಕೊಡಲಿಲ್ಲ. ಈ ವಿಷಯ ಮದ್ರಾಸ್ ಹೈಕೋರ್ಟ್‍ಗೆ ಹೋದರೂ, ಕೋರ್ಟ್ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಲು ಸಾಧ್ಯವಿಲ್ಲ ಎಂದು ತೀರ್ಮಾನ ನೀಡಿತು. ಆಗ ಅಂಬೇಡ್ಕರ್ ಸಂವಿಧಾನದಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಬೇಕೆಂಬ ತಿದ್ದುಪಡಿ ತಂದರು. ಇದು ಹಿಂದುಳಿದ ವರ್ಗಗಳ ಪಾಲಿಗೆ ಮೊದಲ ತಿದ್ದುಪಡಿಯಾಯಿತು ಎಂದರು.

ವಿದ್ಯಾರ್ಥಿಗಳು ಸರ್ಕಾರ ನೀಡುವ ಸೌಲಭ್ಯಗಳನ್ನು ಅರಿತುಕೊಳ್ಳಬೇಕಿದೆ. ಅವುಗಳನ್ನು ಬಳಸಿಕೊಂಡು ಜೀವನದ ಗುರಿ ಸಾಧಿಸಿ ಸಮಾಜ ಸೇವೆಯಲ್ಲಿ ತೊಡಗಬೇಕಿದೆ.  ಶಿಕ್ಷಣದಿಂದ ಮಾತ್ರವೇ ಸಮಾಜದಲ್ಲಿ ಉನ್ನತ ವ್ಯಕ್ತಿಯಾಗಿ ಬೆಳೆಯಲು ಸಾಧ್ಯ ಹಾಗೂ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ.  ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ತೆಲುಗು ಶೆಟ್ಟರು ಸಮುದಾಯ ಮೇಲೆ ಬರಲು ಎಲ್ಲ ರೀತಿಯ ಮೂಲ ಸೌಕರ್ಯಗಳನ್ನು ಹಾಗೂ ವ್ಯವಸ್ಥೆಗಳನ್ನು ಕಲ್ಪಿಸಲು ಸರ್ಕಾರ ಸಿದ್ಧವಿದೆ ಎಂದು ಭರವಸೆ ನೀಡಿದರು.

ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಇತರ ಹಿಂದುಳಿದ ವರ್ಗದವರಿಗೆ ಸಿಗುತ್ತಿರುವ ಸರ್ಕಾರಿ ಸೌಲಭ್ಯಗಳು ಈ ಜನಾಂಗದ ವಿದ್ಯಾರ್ಥಿಗಳಿಗೂ ದೊರಕಬೇಕಿದೆ. ಶಿಕ್ಷಣ, ಕಲೆ, ಸಾಹಿತ್ಯ ಎಲ್ಲಾ ಕ್ಷೇತ್ರದಲ್ಲಿಯೂ ಈ ಜನಾಂಗ ಮುಂದೆ ಬರುವ ಕೆಲಸ ಮಾಡಬೇಕಿದೆ. ಶಿಕ್ಷಣದಿಂದ ಮಾತ್ರ ಸಮಾನತೆ, ಸಾಮಾಜಿಕ ನ್ಯಾಯ ತರಲು ಸಾಧ್ಯವೆಂಬುದನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕೆಂದರು.

ಕಾರ್ಯಕ್ರಮದಲ್ಲಿ ಸಂಘದ ವತಿಯಿಂದ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಸುಮಾರು 90 ಮಂದಿ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. 19 ಲಕ್ಷದ ರೂ ವೆಚ್ಚದಲ್ಲಿ ನಿರ್ಮಿಸಿರುವ ಅಡುಗೆ ಮನೆಯ ನೂತನ ಕಟ್ಟಡವನ್ನು ಮಾಜಿ ಮಹಾಪೌರರಾದ ಆರ್.ಲಿಂಗಪ್ಪ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಕೊಳ್ಳೇಗಾಲ ಕ್ಷೇತ್ರದ ಮಾಜಿ ಶಾಸಕ ಎಸ್.ಬಾಲರಾಜು, ಸಂಘದ ಅಧ್ಯಕ್ಷ ಹೆಚ್.ಎಸ್.ಇಂದ್ರಶೆಟ್ಟಿ, ಉಪಾಧ್ಯಕ್ಷರುಗಳಾದ ವಿ.ಮಂಜುನಾಥ್, ರಾಮಶೆಟ್ಟಿ, ಹೇಮಚಂದ್ರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಆರ್.ಸುಬ್ರಮಣ್ಯ,ಕಾಂಗ್ರೆಸ್ ಮುಖಂಡ ಕಳಲೆ ಮಹದೇವು, ನಂಜುಂಡಸ್ವಾಮಿ, ಕೃಷ್ಣಪ್ಪ, ಗಾಯಿತ್ರಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: