ಮೈಸೂರು

ಮುಖಂಡರ ವಿರುದ್ಧ ಹೇಳಿಕೆ ನೀಡಿರುವ ಜೆಡಿಎಸ್ ಸದಸ್ಯನ ವಿರುದ್ಧ ಕ್ರಮಕ್ಕೆ ಆಗ್ರಹ

ಮೈಸೂರು ಅ,23 : ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜು, ನಗರಪಾಲಿಕೆ ಸದಸ್ಯ ಸಂದೇಶ್ ಸ್ವಾಮಿ ಅವರ ಬಗ್ಗೆ ಮಾಧ್ಯಮಗಳಲ್ಲಿ ಅವಹೇಳನಕಾರಿ ಹೇಳಿಕೆ ನೀಡಿರುವ ಅಜೀಜ್ ಉಲ್ಲಾ (ಅಜ್ಜು) ವಿರುದ್ಧ ಕ್ರಮಕೈಗೊಳ್ಳುವಂತೆ ಜೆಡಿಎಸ್ ಮುಖಂಡರನ್ನು ವರಿಷ್ಠರು ಆಗ್ರಹಿಸಿದರು.

ಪಕ್ಷದಲ್ಲಿದ್ದುಕೊಂಡೆ ಪಕ್ಷದ ಮುಖಂಡರ ವಿರುದ್ಧ ಕೋಮುಭಾವನೆ ಬರುವಂತೆ ಹೇಳಿಕೆ ನೀಡಿದ್ದಾರೆ. ಇದು ಪಕ್ಷದ ಮೇಲೆ ಪರಿಣಾಮ ಬೀರುವುದಲ್ಲದೇ ಮುಂಬರುವ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿರುವ ಸಂದೇಶ ಸ್ವಾಮಿ ಅವರ ಮೇಲೆ ಸಾರ್ವಜನಿಕರಲ್ಲಿ ವ್ಯತಿರಿಕ್ತ ಭಾವನೆ ಮೂಡಲಿದೆ ಎಂದು ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಎನ್. ಆರ್. ಕ್ಷೇತ್ರದ ಅಧ್ಯಕ್ಷ ಮಹ್ಮದ್ ಶರೀಫ್ ದೂರಿದರು.

ಹಲವು ಪಕ್ಷಗಳಿಗೆ ಹೋಗಿ ಬಂದಿರುವ ಇವರು ಸ್ವತಃ ನಗರಪಾಲಿಕೆ ಚುನಾವಣೆಯಲ್ಲಿಯೂ ಗೆಲ್ಲಲ್ಲು ಸಾಧ್ಯವಾಗಿಲ್ಲ, ಸಂದೇಶ ಸ್ವಾಮಿಯವರ ಪ್ರಯತ್ನದಿಂದ ಅವರ ಅತ್ತಿಗೆಯನ್ನು ನಗರಪಾಲಿಕೆ ಸದಸ್ಯೆಯನ್ನಾಗಿ ಮಾಡಲಾಗಿದೆ. ಇದನ್ನು ಮರೆತಿರುವ ಅಜ್ಜು ಈ ಪಕ್ಷದ ಮುಖಂಡರ ವಿರುದ್ಧವೇ ಹೇಳಿಕೆ ನೀಡುತ್ತಿರುವುದು ಅಕ್ಷಮ್ಯ ಎಂದರು.

ನಗರಪಾಲಿಕೆ ಸದಸ್ಯರಾದ ಪೈರೋಜ್ ಖಾನ್, ಮಹದೇವಪ್ಪ ಮಾತನಾಡಿ ಕಳೆದ ಚುನಾವಣೆಯಲ್ಲಿ ಹದಿನೈದು ದಿನಗಳ ಅಂತರದಲ್ಲಿ ಸಿಕ್ಕ ಬಿ ಫಾರಂ ನಿಂದ ಸರಿಯಾಗಿ ಸಿದ್ಧತೆ ಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ, ಜೊತೆಗೆ ಪಕ್ಷದ ವರಿಷ್ಠರು ಪ್ರಚಾರಕ್ಕೆ ಬಾರದಿದ್ದರು ನಿರೀಕ್ಷೆಗೂ ಹೆಚ್ಚು ಮತಗಳನ್ನು ಸಂದೇಶ ಸ್ವಾಮಿ ಪಡೆದಿದ್ದರು. ಈಗ ಚುನಾವಣಾ ಪೂರ್ವದಲ್ಲಿಯೇ ಟಿಕೆಟ್ ಖಾತರಿಯಾಗಿರುವುದರಿಂದ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಯುತ್ತಿರುವುದರಿಂದ ಇವರ ಹೇಳಿಕೆ ವ್ಯತಿರಿಕ್ತ ಪರಿಣಾಮ ಬೀರಲಿದೆ, ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ವರಿಷ್ಠರಲ್ಲಿ ಒಕ್ಕೊರಲಿನಿಂದ ಒತ್ತಾಯಿಸಿದರು.

ನಗರಪಾಲಿಕೆ ಸದಸ್ಯ ರಾಮು, ಮುಖಂಡರಾದ ಎಂ.ಎನ್.ರಾಮು, ಪರಮೇಶ್ವರ್, ಚಂದ್ರು ಗೌಡ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: