ಮೈಸೂರು

ತುಂಡುಗುತ್ತಿಗೆಯಲ್ಲಿ ನಡೆದಿರುವ ಅವ್ಯವಹಾರದ ತನಿಖೆ ನಡೆಸಿ : ವಾಲ್ಮೀಕಿ ನಾಯಕರ ಪ್ರತಿಭಟನೆ

ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ನ  ತುಂಡುಗುತ್ತಿಗೆಯಲ್ಲಿ ನಡೆದಿರುವ ಅವ್ಯವಹಾರದ ಕುರಿತು ತನಿಖೆಗೆ ಆಗ್ರಹಿಸಿ ಮೈಸೂರಿನ ವಾಲ್ಮೀಕಿ ನಾಯಕರ ಜಾಗೃತಿ ವೇದಿಕೆ ವತಿಯಿಂದ ಪ್ರತಿಭಟನೆ ನಡೆಯಿತು.

ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಪರಿಶಿಷ್ಟ ಜಾತಿ, ವರ್ಗದ ಗುತ್ತಿಗೆದಾರರು ಕಾಮಗಾರಿ ಕೋರಿ ಅರ್ಜಿ ಸಲ್ಲಿಸಿದರೂ ಸಹ ತುಂಡುಗುತ್ತಿಗೆ ಕಾಮಗಾರಿಗಳನ್ನು ನೀಡುತ್ತಿಲ್ಲ. ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಸದಸ್ಯರುಗಳೊಂದಿಗೆ ಕಾರ್ಯನಿರ್ವಾಹಕ ಅಧಿಕಾರಿಗಳು, ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರು ಸೇರಿಕೊಂಡು ಸರ್ಕಾರದ ಅನುದಾನವನ್ನು ಹಂಚಿಕೊಂಡು ಅವ್ಯವಹಾರ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಯಾವ ಗುತ್ತಿಗೆದಾರರು ಅತಿ ಹೆಚ್ಚು ಕಮೀಷನ್ ನೀಡುತ್ತಾರೋ ಅಂತಹ ಗುತ್ತಿಗೆದಾರರಿಗೆ ಮಾತ್ರ ಅಧಿಕಾರಿಗಳು, ಜನಪ್ರತಿನಿಧಿಗಳು ತುಂಡುಗುತ್ತಿಗೆ ಕಾಮಗಾರಿಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಸರ್ಕಾರದಿಂದ ಮಂಜೂರಾಗಿರುವ ವಾಲ್ಮೀಕಿ ಸಮುದಾಯ ಭವನಗಳ ನಿರ್ಮಾಣಕ್ಕೆ ನಿವೇಶನ ನೀಡದೆ ಸತಾಯಿಸಲಾಗುತ್ತಿದೆ. ಕೆ.ಆರ್.ನಗರ ತಾಲೂಕಿನ ಗೊಲ್ಲರಕೊಪ್ಪಲಿನಲ್ಲಿ ದೇವಸ್ಥಾನವನ್ನು ಕೆಡಹಿ ವಾಲ್ಮೀಕಿ ಸಮುದಾಯಭವನವನ್ನು ನಿರ್ಮಾಣ ಮಾಡಲು ಹೊರಟಿರುವುದು ಖಂಡನೀಯ ಎಂದರು. ಕೆ.ಆರ್.ನಗರ ಟೌನ್ ನಲ್ಲಿ ನಿರ್ಮಿತಿ ಕೇಂದ್ರದಿಂದ ನಿರ್ಮಾಣಗೊಂಡಿರುವ ಶ್ರೀವಾಲ್ಮೀಕಿ ಸಮುದಾಯ ಭವನ ನಿರ್ಮಾಣದಲ್ಲಿ ಅವ್ಯವಹಾರ ನಡೆಸಲಾಗಿದೆ. ಪರಿಶಿಷ್ಟ ಜಾತಿ, ವರ್ಗದವರು ನರೇಗಾದಡಿ ನಿರ್ಮಾಣ ಮಾಡಿಕೊಂಡಿರುವ ದನದ ಕೊಟ್ಟಿಗೆಗೆ ಸಾಮಗ್ರಿ ವೆಚ್ಚವನ್ನು ಬಿಡುಗಡೆ ಮಾಡುತ್ತಿಲ್ಲ. ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಸಾಲ ಸೌಲಭ್ಯ ನೀಡಲು ವಿಳಂಬ ಮಾಡುತ್ತಿದ್ದಾರೆ. ಪರಿಶಿಷ್ಟ ವರ್ಗದ ವಯೋವೃದ್ಧನಿಗೆ ಸರ್ಕಾರದಿಂದ ಮಂಜೂರಾಗಿರುವ ನಿವೇಶನವನ್ನು ಅತಿಕ್ರಮಣಕಾರರಿಂದ ಬಿಡಿಸಿಕೊಡುತ್ತಿಲ್ಲ ಈ ಕುರಿತು ಪೊಲೀಸರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂತು.

ಪ್ರತಿಭಟನೆಯಲ್ಲಿ ವೇದಿಕೆ ಜಿಲ್ಲಾಧ್ಯಕ್ಷ ಹೊಸಕೋಟೆ ರಾಮನಾಯಕ, ಪ್ರಧಾನಕಾರ್ಯದರ್ಶಿ ದೇವರಾಜು ಕೆ.ಜಿ, ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ದ್ವಾವಪ್ಪ ನಾಯಕ ಮತ್ತಿತರರು ಪಾಲ್ಗೊಂಡಿದ್ದರು.

 

 

Leave a Reply

comments

Related Articles

error: