ಕರ್ನಾಟಕಪ್ರಮುಖ ಸುದ್ದಿ

ವಿಧಾನಸೌಧ ವಜ್ರಮಹೋತ್ಸವದಲ್ಲಿ ಪಾಲ್ಗೊಳ್ಳಲು ಇಂದು ಬೆಂಗಳೂರಿಗೆ ಆಗಮಿಸಲಿರುವ ರಾಷ್ಟ್ರಪತಿ ಕೋವಿಂದ್

ಬೆಂಗಳೂರು,ಅ.24-ವಿಧಾನಸೌಧದ ವಜ್ರಮಹೋತ್ಸವ ಸಮಾರಂಭ ಬುಧವಾರ (ಅ.25) ನಡೆಯಲಿದೆ. ಸಮಾರಂಭದಲ್ಲಿ ಭಾಗವಹಿಸಲಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್ ಮಂಗಳವಾರ ಬೆಂಗಳೂರಿಗೆ ಆಗಮಿಸಲಿದ್ದಾರೆ.

ಕೋವಿಂದ್ ಮಧ್ಯಾಹ್ನ 3.45ಕ್ಕೆ ಎಚ್ಎಎಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ರಾಜಭವನದಲ್ಲಿ ವಾಸ್ತವ್ಯ ಹೂಡಲಿರುವ ಕೋವಿಂದ್ ರಾಜಭವನದ ಗಾಜಿನ ಮನೆಯಲ್ಲಿ ರಾತ್ರಿ ಎಂಟು ಗಂಟೆಗೆ ಆಯೋಜಿಸಿರುವ ಔತಣಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ.

ನ.25ರಂದು ವಿಧಾನಸೌಧ ವಜ್ರಮಹೋತ್ಸವದ ಅಂಗವಾಗಿ ನಡೆಯಲಿರುವ ಉಭಯ ಸದನಗಳ ಜಂಟಿ ಅಧಿವೇಶನದಲ್ಲಿ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಕೋವಿಂದ್ ಭಾಷಣ ಮಾಡಲಿದ್ದಾರೆ. ಕೋವಿಂದ್ ಭಾಷಣ ಮಾಡಲಿರುವ ವಿಧಾನಸಭೆ ಆವರಣ ಹಾಗೂ ಮೊಗಸಾಲೆಯನ್ನು ಈಗಾಗಲೇ ಅಲಂಕರಿಸಲಾಗುತ್ತಿದೆ.

ವಿಧಾನಸಭೆ ಮತ್ತು ಮೇಲ್ಮನೆಯ ಎಲ್ಲ 300 ಸದಸ್ಯರು ರಾಷ್ಟ್ರಪತಿಯವರೊಟ್ಟಿಗೆ ಗ್ರೂಪ್ ಫೋಟೋ ತೆಗೆಸಿಕೊಳ್ಳಲು ಸಾಧ್ಯವಾಗುವಂತೆ ವಿಧಾನಸೌಧ ಮತ್ತು ವಿಕಾಸಸೌಧ ಮಧ್ಯದ ಆವರಣದ ಗಾಂಧಿ ಪ್ರತಿಮೆ ಬಳಿ ವಿಶೇಷ ವೇದಿಕೆ ಸಿದ್ಧಗೊಳಿಸಲಾಗಿದೆ. ಮೂರು ಸಾಕ್ಷ್ಯಚಿತ್ರಗಳ ಪ್ರದರ್ಶನಕ್ಕೆ ಎಲ್ಲ ಸಿದ್ಧತೆ ಮಾಡಲಾಗಿದೆ.

ಸಂಜೆ ವಿಧಾನಸೌಧ ಪೂರ್ವದ್ವಾರದ ಮೆಟ್ಟಿಲುಗಳ ಮೇಲೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವೇದಿಕೆ ನಿರ್ಮಾಣಗೊಂಡಿದೆ. ಮೆಟ್ಟಿಲುಗಳ ಮೇಲೆಯೇ ಆಕರ್ಷಕವಾಗಿ ಸಿದ್ಧಪಡಿಸಿರುವ ವೇದಿಕೆಯಲ್ಲಿ ಅ.25ರ ಸಂಜೆ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಹಾಗೂ ತಂಡ ರಸಮಂಜರಿ ಕಾರ್ಯಕ್ರಮ ನಡೆಸಿಕೊಡಲಿದೆ. (ವರದಿ-ಎಂ.ಎನ್)

 

Leave a Reply

comments

Related Articles

error: