
ಕರ್ನಾಟಕಪ್ರಮುಖ ಸುದ್ದಿ
ಶಾಂತಿ ಕದಡುವ ಕೆಲಸ ಮಾಡುವವರ ವಿರುದ್ಧ ಕಠಿಣ ಕ್ರಮ : ಮುಖ್ಯಮಂತ್ರಿ ಸಿದ್ಧರಾಮಯ್ಯ
ರಾಜ್ಯ(ಬೆಂಗಳೂರು)ಅ.24:- ಟಿಪ್ಪು ಜಯಂತಿ ಸಂದರ್ಭದಲ್ಲಿ ಶಾಂತಿ ಕದಡುವ ಕೆಲಸ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು. ಟಿಪ್ಪುಜಯಂತಿ ಆಚರಣೆ ವಿಚಾರವನ್ನು ಇಟ್ಟುಕೊಂಡು ಹಿಂದೂ ಮುಸ್ಲಿಂ ನಡುವೆ ಬೆಂಕಿ ಹಚ್ಚುವ ಕೆಲಸವನ್ನು ಕೆಲವರು ನಡೆಸಿದ್ದಾರೆ. ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ. ಇದನ್ನೆಲ್ಲಾ ಸಹಿಸುವುದಿಲ್ಲ. ಶಾಂತಿ ಕದಡಿದರೆ ನಿರ್ದಾಕ್ಷಿಣ್ಯವಾಗಿ ಯಾವುದೇ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಗುಡುಗಿದರು.
ಮುಖ್ಯಮಂತ್ರಿ ಗೃಹ ಕಛೇರಿ ಕೃಷ್ಣಾದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಹತ್ತಿರ ಬರುತ್ತಿರುವುದರಿಂದ ರಾಜಕೀಯವಾಗಿ ಲಾಭ ಮಾಡಿಕೊಳ್ಳಲು ಬಿಜೆಪಿಯವರು ಗೊಂದಲ ಸೃಷ್ಟಿಸುತ್ತಿದ್ದಾರೆ. ಹಿಂದೆ ಟಿಪ್ಪುವನ್ನು ಹಾಡಿ, ಹೊಗಳಿದ್ದ ಬಿಜೆಪಿ ನಾಯಕರು ಈಗ ಟಿಪ್ಪುಜಯಂತಿಗೆ ವಿರೋಧ ಮಾಡುತ್ತಿರುವುದು ಅರ್ಥವಿಲ್ಲದ್ದು ಎಂದರು. ಕರ್ನಾಟಕದ ದೇವನಹಳ್ಳಿಯಲ್ಲಿ ಹುಟ್ಟಿರುವ ಟಿಪ್ಪುಸುಲ್ತಾನ್ ಬ್ರಿಟಿಷರ ವಿರುದ್ಧ ಹೋರಾಡಿ ಮಡಿದಿದ್ದಾರೆ. ಇತಿಹಾಸ ತಿರುಚುವ ಕೆಲಸ ಬೇಡ ಎಂದರು. ಟಿಪ್ಪು ಜಯಂತಿ ಆಚರಿಸುವವರನ್ನು ಗಲ್ಲಿಗೇರಿಸಬೇಕು ಎಂಬ ಸಂಸದ ಪ್ರತಾಪ್ಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಸಂವಿಧಾನದ ಬಗ್ಗೆ ಗೌರವ ಇಲ್ಲದವರು ಈ ರೀತಿ ಮಾತನಾಡುತ್ತಾರೆ. ಸಂವಿಧಾನಕ್ಕೆ ಗೌರವ ಕೊಡುತ್ತೇವೆ ಎಂದು ಹೇಳಿ ಪ್ರಮಾಣ ವಚನ ಸ್ವೀಕಾರ ಮಾಡಿರುವುದನ್ನು ಬಿಜೆಪಿಯವರು ಮರೆತಂತೆ ಇದೆ ಎಂದು ವಾಗ್ದಾಳಿ ನಡೆಸಿದರು. ಅಧಿಕಾರದಲ್ಲಿದ್ದಾಗ ಜಗದೀಶ್ಶೆಟ್ಟರ್ ಮತ್ತು ಆರ್. ಅಶೋಕ್ ಟಿಪ್ಪು ಜಯಂತಿ ಆಚರಣೆಯಲ್ಲಿ ಪಾಲ್ಗೊಂಡಿದ್ದರು. ಈಗೊಂದು ನಾಲಿಗೆ, ಆಗೊಂದು ನಾಲಿಗೆ ಇವರದ್ದು ಎಂದು ಕಿಡಿಕಾರಿದರು. ಏನೇ ವಿರೋಧ ಬರಲಿ ಟಿಪ್ಪುಜಯಂತಿ ಆಚರಣೆ ನಿಲ್ಲದು ಎಂದು ಅವರು ಸ್ಪಷ್ಟಪಡಿಸಿದರು. ಕಾಂಗ್ರೆಸ್ ಮುಖಂಡರ ಮೇಲೆ ನಡೆಯುತ್ತಿರುವ ಐಟಿ ದಾಳಿಯ ಬಗ್ಗೆ ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ರಾಜಕೀಯವಾಗಿ ಲಾಭ ಆಗುತ್ತೆ ಎನ್ನುವ ಕಾರಣಕ್ಕೆ ಕಾಂಗ್ರೆಸ್ ಮುಖಂಡರನ್ನು ಗುರಿಯಾಗಿಸಿ ಐಟಿ ದಾಳಿ ನಡೆಸಲಾಗುತ್ತಿದೆ. ಬಿಜೆಪಿ ಮುಖಂಡರ ಮೇಲೆ ಐಟಿ ದಾಳಿ ಏಕೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು. ವಿದ್ಯುತ್ ಇಲಾಖೆಯಲ್ಲಿನ ಕಲ್ಲಿದ್ದಲು ಖರೀದಿ, ವಿದ್ಯುತ್ ಖರೀದಿ ನಡೆದಿರುವ ಅಕ್ರಮಗಳ ಬಗ್ಗೆ ವರದಿ ನೀಡಲು ಸದನ ಸಮಿತಿ ರಚಿಸಲಾಗಿದೆ. ಶೋಭಾಕರಂದ್ಲಾಜೆ ಅವರು ಇಂಧನ ಸಚಿವರಾಗಿದ್ದ ಅವಧಿಯೂ ಸೇರಿದಂತೆ ಇಲಾಖೆಯ ಅಕ್ರಮಗಳ ಬಗ್ಗೆ ಸದನ ಸಮಿತಿ ತನಿಖೆ ನಡೆಸುತ್ತಿದೆ. ಸಮಿತಿ ವರದಿ ನೀಡಿದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.
ಇಲಾಖೆಯಲ್ಲಿನ ವಿದ್ಯುತ್ ಖರೀದಿ ಬಗ್ಗೆ ಅಧಿಕಾರಿಗಳು ತೀರ್ಮಾನ ಕೈಗೊಳ್ಳುತ್ತಾರೆ. ಸಚಿವರಲ್ಲ ತೀರ್ಮಾನ ಕೈಗೊಳ್ಳುವುದು ಎಂಬ ಶೋಭಾಕರಂದ್ಲಾಜೆ ಅವರ ಹೇಳಿಕೆಯನ್ನು ಗಮನಿಸಿದ್ದೇನೆ. ಹಾಗಾದರೆ ಮಂತ್ರಿಗಳದ್ದೇನು ಕೆಲಸ ಎಂದು ಅವರು ಮಾರ್ಮಿಕವಾಗಿ ಹೇಳಿ, ಎಲ್ಲದಕ್ಕೂ ಉತ್ತರ ನೀಡುವವರು ಮಂತ್ರಿಗಳಲ್ಲವೆ ಎಂದು ಪ್ರಶ್ನಿಸಿದರು. (ಕೆ.ಎಸ್,ಎಸ್.ಎಚ್)