ಮೈಸೂರು

ರೈತರ ಸಾಲ ತೀರುವಳಿಗಾಗಿ ಭಾರತೀಯ ಸ್ಟೇಟ್ ಬ್ಯಾಂಕ್ ನಿಂದ ರಿನ್ ಸಮಾಧಾನ್ ಯೋಜನೆ

ಮೈಸೂರು,ಅ.25:- ಭೀಕರ ಬರಗಾಲದಿಂದ ಬೆಳೆ ಕೈಸೇರದೆ ನಷ್ಟಕ್ಕೆ ಒಳಗಾಗಿ ಸುಸ್ಥಿದಾರರಾಗಿರುವ ರೈತರು ತಮ್ಮ ಸಾಲವನ್ನು ತೀರುವಳಿ ಮಾಡಿಕೊಂಡು ಋಣಮುಕ್ತರಾಗಲು ರಿನ್ ಸಮಾಧಾನ್ ಎಂಬ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್‍ನ ಎಜಿಎಂ ಮಹದೇವ್‍ಕುಮಾರ್ ತಿಳಿಸಿದರು.

ಅವರು ಪಿರಿಯಾಪಟ್ಟಣದ ಎಸ್‍ಬಿಐ(ಎಡಿಬಿ) ಶಾಖೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಏಕಕಾಲದಲ್ಲಿ ಸಾಲ ಇತ್ಯರ್ಥ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ಎಸ್‍ಬಿಐ ರೈತರಿಗೆ ಸಾಲ ಮರುಪಾವತಿಗಾಗಿ ಯಾವುದೇ ಒತ್ತಡವನ್ನು ಹೇರದೆ ಅವರ ಸಮಸ್ಯೆಗಳಿಗೆ ಸ್ಪಂದಿಸಲಿದೆ ಎಂದರು. ಸುಸ್ಥಿದಾರರ ಸಮಸ್ಯೆಗಳನ್ನು ಚರ್ಚಿಸಲು ಬ್ಯಾಂಕಿನಲ್ಲಿ ಮುಕ್ತ ಅವಕಾಶ ಕಲ್ಪಿಸಲಾಗಿದ್ದು ಆರಂಭದಲ್ಲಿ ಶೇ.10 ರಷ್ಟು ಸಾಲ ಮರುಪಾವತಿ ಮಾಡಿದಲ್ಲಿ ನಂತರದ ನಿರ್ದಿಷ್ಟ ಅವಧಿಯ ದಿನಗಳಲ್ಲಿ ಇನ್ನುಳಿದ ಹಣವನ್ನು ಪಾವತಿಸಲು ಅವಕಾಶ ನೀಡಲಾಗುತ್ತಿದ್ದು ಈ ಯೋಜನೆಯಿಂದಾಗಿ ಸುಸ್ಥಿದಾರರು ಋಣಮುಕ್ತರಾಗಬಹುದಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೋಗಿಲವಾಡಿ ಗ್ರಾಮದ ರೈತ ರಾಮಚಂದ್ರ ಮಾತನಾಡಿ ತಂಬಾಕು ಬೆಳೆಗಾರರು ಬ್ಯಾಂಕಿನಲ್ಲಿ ಕೃಷಿ ಸಾಲವನ್ನು ಪಡೆದಿದ್ದು ತಂಬಾಕು ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ ಹಣ ರೈತರ ಖಾತೆಗೆ ಬರುತ್ತಿದ್ದು ಈ ಹಣದಲ್ಲಿ ಶೇ.50 ರಷ್ಟು ಹಣವನ್ನು ತಂಬಾಕು ಬೆಳೆಗಾರರಿಗೆ ನೀಡಿದಲ್ಲಿ ಅವರು ತಮ್ಮ ಕೈಸಾಲ ಹಾಗೂ ದೈನಂದಿನ ನಿರ್ವಹಣೆ ವೆಚ್ಚವನ್ನು ಭರಿಸಲು ಸಾಧ್ಯವಾಗಲಿದೆ ಎಂದರು.

ಈ ಸಂದರ್ಭದಲ್ಲಿ ಎಸ್‍ಬಿಐ ನ ಮುಖ್ಯ ವ್ಯವಸ್ಥಾಪಕಿ ಶಶಿಕಲಾ, ಶಾಖಾ ವ್ಯವಸ್ಥಾಪಕ ವೆಂಕಟರಾವ್ ಸೇರಿದಂತೆ ಬ್ಯಾಂಕಿನ ಸಿಬ್ಬಂದಿಗಳು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: