
ಕರ್ನಾಟಕ
ಮುಂದುವರೆದ ಚಿರತೆ ಹಾವಳಿ
ರಾಜ್ಯ(ಮಂಡ್ಯ)ಅ.25:- ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಹೋಬಳಿಯ ರಾಜೇನಹಳ್ಳಿ ಗ್ರಾಮದಲ್ಲಿ ಮತ್ತೆ ಚಿರತೆ ಹಾವಳಿ ಮುಂದುವರೆದಿದ್ದು, ಕುರಿಯೊಂದನ್ನು ಸಾಯಿಸಿ ಹೊತ್ತೊಯ್ಯಲು ಪ್ರಯತ್ನಿಸಿದಾಗ ಗ್ರಾಮಸ್ಥರ ಸದ್ದು ಕೇಳಿ ಪರಾರಿಯಾಗಿರುವ ಘಟನೆ ನಡೆದಿದೆ.
ಗ್ರಾಮದ ಕೃಷ್ಣೇಗೌಡ ಎಂಬುವರ ಮಗ ವಿಶ್ವೇಶ್ ಎಂಬುವರಿಗೆ ಸೇರಿದ ಕುರಿ ಚಿರತೆ ದಾಳಿಗೆ ಬಲಿಯಾಗಿದ್ದು ಸುಮಾರು 10ಸಾವಿರ ರೂ ನಷ್ಟ ಉಂಟಾಗಿದೆ.ಕಳೆದ ವಾರದ ಹಿಂದಷ್ಟೆ ರಾಜೇನಹಳ್ಳಿ ಗ್ರಾಮದ ರೈತ ವಿಶ್ವೇಶ್ ಎಂಬುವವರ ಮೇಕೆಯನ್ನು ಶೇ.80ರಷ್ಟು ತಿಂದು ಉಳಿದ ಕಳೇ ಬರವನ್ನು ಗ್ರಾಮದ ಬಾಳೆವೊಂದರ ಬಳಿ ಬಿಟ್ಟು ಚಿರತೆಯು ಪರಾರಿಯಾಗಿತ್ತು ಹಾಗಾಗಿ ಕುರಿಗಳನ್ನು ಕುರಿಕೊಟ್ಟಿಗೆಯಲ್ಲಿ ಕೂಡಿ ಹಾಕಿ ಸಮೀಪವೇ ಮಲಗಿದ್ದರು. ಮಧ್ಯರಾತ್ರಿ ಸಮಯದಲ್ಲಿ ಚಿರತೆ ಶೆಡ್ ಗೆ ನುಗ್ಗಿ ಕುರಿಯನ್ನು ಗುತ್ತಿಗೆ ಭಾಗದಲ್ಲಿ ಕಚ್ಚಿ ಸಾಯಿಸಿದ ನಂತರ ಹೊತ್ತೊಯ್ಯಲು ಪ್ರಯತ್ನಿಸಿದೆ. ಈ ಸಂದರ್ಭದಲ್ಲಿ ಕುರಿಗಳ ಚಿರಾಟದಿಂದ ವಿಶ್ವೇಶ್ ಸೇರಿದಂತೆ ಅಕ್ಕಪಕ್ಕದ ಮನೆಯವರು ಎಚ್ಚರಗೊಂಡು ಹೊರಗೆ ಬಂದು ನೋಡಿದಾಗ ಚಿರತೆ ಕುರಿಯನ್ನು ಹೊತ್ತೊಯ್ದಿರುವುದು ತಿಳಿದು ಬಂದಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ತಕ್ಷಣ ಬೋನಿಟ್ಟು ರೈತರ ಕುರಿ-ಮೇಕೆಯನ್ನು ತಿನ್ನುವ ಮೂಲಕ ತೊಂದರೆ ನೀಡುತ್ತಿರುವ ಚಿರತೆಯನ್ನು ಹಿಡಿಯಬೇಕೆಂದು ರಾಜೇನಹಳ್ಳಿ ಸುತ್ತಮುತ್ತಲ ಗ್ರಾಮಸ್ಥರು ಒತ್ತಾಯಿಸಿದ್ದಾರೆ. (ಕೆ.ಎಸ್,ಎಸ್.ಎಚ್)