ಪ್ರಮುಖ ಸುದ್ದಿಮೈಸೂರು

ಸಿದ್ದರಾಮಯ್ಯ ಆಧುನಿಕ ಕಾಲದ ತುಘಲಕ್: ಶ್ರೀನಿವಾಸ ಪ್ರಸಾದ್

ಇತ್ತೀಚಿಗೆ ಕಾಂಗ್ರೆಸ್‍ ಪಕ್ಷಕ್ಕೆ ರಾಜೀನಾಮೆ ನೀಡಿದ ಮಾಜಿ ಶಾಸಕ ಶ್ರೀನಿವಾಸ ಪ್ರಸಾದ್ ಮಂಗಳವಾರ ನಂಜನಗೂಡಿನಲ್ಲಿ ಬೆಂಬಲಿಗರ ಮತ್ತು ಅಭಿಮಾನಿಗಳ ಸಮಾವೇಶ ನಡೆಸಿದರು. ಶ್ರೀನಿವಾಸ ಪ್ರಸಾದ್ ಅವರ ಮುಂದಿನ ರಾಜಕೀಯ ನಡೆಯ ಹಿನ್ನೆಲೆಯಲ್ಲಿ ಈ ಸಮಾವೇಶ ಬಹಳ ಮಹತ್ವ ಪಡೆದಿತ್ತು. ವಿದ್ಯಾವರ್ಧಕ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರ ಸಾವಿರಾರು ಬೆಂಬಲಿಗರು ಭಾಗವಹಿಸಿದ್ದರು.

“ಈ ಸಮಾವೇಶ ನನಗೆ ತುಂಬಾ ಮುಖ್ಯವಾಗಿದೆ. ಜನರು ನನ್ನ ಮೇಲಿಟ್ಟಿರುವ ಪ್ರೀತಿ ಮತ್ತು ಗೌರವನ್ನು ನೋಡಿ ನಾನು ಮೂಕವಿಸ್ಮಿತನಾಗಿದ್ದೇನೆ. ನೀವು ನನ್ನನ್ನು ಆಯ್ಕೆ ಮಾಡಿ ಅಧಿಕಾರ ನೀಡಿದ್ದೀರಿ. ಕಾರಣಾಂತರಗಳಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಕ್ಕೆ ಕ್ಷಮೆ ಯಾಚಿಸುತ್ತೇನೆ” ಎಂದು ಪ್ರಸಾದ್ ಹೇಳಿದರು.

ರಾಮಕೃಷ್ಣ ಹೆಗಡೆ ಮತ್ತು ಇತರ ಸಾಮಾಜಿಕ ಕಾರ್ಯಕರ್ತರ ಕಾಲದಿಂದ ನಾನು ರಾಜಕಾರಣದಲ್ಲಿದ್ದೇನೆ. ದೇವರಾಜ ಅರಸು ಬೆಂಬಲದೊಂದಿಗೆ ಚುನಾವಣೆ ಕಣಕ್ಕಿಳಿದಿದ್ದ ಅಭ್ಯರ್ಥಿಗಳನ್ನು ಸೋಲಿಸಿದ್ದೇನೆ. ಆಗ ಸಿದ್ದರಾಮಯ್ಯ ಎಲ್ಲಿದ್ದರು? ಸಿದ್ದರಾಮಯ್ಯ ಅವರು ತುಘಲಕ್ ರೀತಿ. ಅಭಿವೃದ್ಧಿ ಆಡಳಿತದ ಬಗ್ಗೆ ಅವರಿಗೆ ಏನೂ ತಿಳಿದಿಲ್ಲ ಎಂದು ದೂರಿದರು.

ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ಮುಂದುವರಿಸಿದ ಅವರು, “ವರುಣಾ ವಿಧಾನಸಭೆ ಕ್ಷೇತ್ರದಲ್ಲಿ ನನ್ನನ್ನು ಗೆಲ್ಲಿಸಿ ಎಂದು ಸಿದ್ದರಾಮಯ್ಯ ಅವರು ಸಹಾಯ ಕೋರಿ ನನ್ನ ಮನೆ ಬಾಗಿಲಿಗೆ ಬಂದಿದ್ದರು. ನನ್ನಿಂದ ಬೆಂಬಲ ಪಡೆದು ನನ್ನನ್ನೇ ಕೆಳಗೆ ಉರುಳಿಸಲು ನೋಡಿದರು” ಎಂದು ಆರೋಪಿಸಿದರು.

ಕಾಂಗ್ರೆಸ್‍ ಎರಡು ವಾರಗಳ ಹಿಂದೆ ನಂಜನಗೂಡಿನಲ್ಲಿ ಸಮಾವೇಶ ಆಯೋಜಿಸಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‍.ಸಿ. ಮಹದೇವಪ್ಪ ಅವರ ಟೀಕೆಗಳಿಗೆ ಉತ್ತರ ನೀಡಲು ಮತ್ತು ತನ್ನ ಬಲ ಪ್ರದರ್ಶಿಸಲು ಶ್ರೀನಿವಾಸ ಪ್ರಸಾದ್ ಅವರು ಈ ಸಮಾವೇಶವನ್ನು ಆಯೋಜಿಸಿದ್ದರು. ಸಮಾವೇಶಕ್ಕೂ ಮೊದಲು ಪ್ರಸಾದ್ ಅವರ ಸಹೋದರ ರಾಮಸ್ವಾಮಿ ಕಾಂಗ್ರೆಸ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.

ಮೂಡಾ ಮಾಜಿ ಅಧ್ಯಕ್ಷ ಕೆ.ಆರ್. ಮೋಹನ್ ಕುಮಾರ್, ನಂಜನಗೂಡು ನಗರ ಕೌನ್ಸಿಲ್ ಅಧ್ಯಕ್ಷ ಪುಷ್ಪಲತಾ ಕಮಲೇಶ್, ಮಾಜಿ ನಗರ ಕೌನ್ಸಿಲ್ ಅಧ್ಯಕ್ಷ ಮೀನಾಕ್ಷಿ ರಾಮ್, ಜಿಪಂ ಸದಸ್ಯ ಸುಬ್ಬಣ್ಣ, ತಾಲೂಕು ಪಂಚಾಯಿತಿ ಅಧ್ಯಕ್ಷ ಮಹದೇವಪ್ಪ ಮತ್ತು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

comments

Related Articles

error: