ಕರ್ನಾಟಕಪ್ರಮುಖ ಸುದ್ದಿ

ಎಂ.ಕೆ ಗಣಪತಿ ಆತ್ಮಹತ್ಯೆ ಪ್ರಕರಣ ; ಸಚಿವ ಜಾರ್ಜ್ ರಾಜೀನಾಮೆ ಪಡೆಯುವ ಅಗತ್ಯವಿಲ್ಲ : ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ಅ. ೨೭- ಡಿವೈಎಸ್ಪಿ ಎಂ.ಕೆ ಗಣಪತಿ ಆತ್ಮಹತ್ಯೆ ಪ್ರಕರಣ ಸಂಬಂಧ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ ಜಾರ್ಜ್‌ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿರುವ ಹಿನ್ನೆಲೆಯಲ್ಲಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆದಿಯಾಗಿ ಇಡೀ ಸಚಿವ ಸಂಪುಟದ ಸದಸ್ಯರು ಜಾರ್ಜ್‌ರವರ ಬೆಂಬಲಕ್ಕೆ ನಿಂತಿದ್ದು, ಸಚಿವ ಜಾರ್ಜ್ ರಾಜೀನಾಮೆ ಅಗತ್ಯವಿಲ್ಲ. ಅವರಿಂದ ರಾಜೀನಾಮೆ ಪಡೆಯುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಧ್ವನಿಯಲ್ಲಿ ಹೇಳಿದರು.

ಸಿಬಿಐ ಸಚಿವ ಜಾರ್ಜ್ ವಿರುದ್ಧ ಎಫ್‌ಐಆರ್ ದಾಖಲಿಸಿರುವ ಬೆನ್ನಲ್ಲೆ ಮುಂದಿನ ರಾಜಕೀಯ ನಡೆಯನ್ನು ತೀರ್ಮಾನಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಹಿರಿಯ ಸಚಿವರು ಹಾಗೂ ಪಕ್ಷದ ಹಿರಿಯ ಮುಖಂಡರ ಸಭೆಯಲ್ಲೂ ಸಚಿವ ಜಾರ್ಜ್ ರಾಜೀನಾಮೆ ಪಡೆಯುವ ಅಗತ್ಯವಿಲ್ಲ ಎಂಬ ತೀರ್ಮಾನಕ್ಕೆ ಬರಲಾಯಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಸುಪ್ರೀಂಕೋರ್ಟಿನ ಆದೇಶದಲ್ಲಿ ಜಾರ್ಜ್‌ರವರ ಹೆಸರು ಪ್ರಸ್ತಾಪ ಆಗಿಲ್ಲ. ಜೊತೆಗೆ ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ಸಿಐಡಿಯ ಬಿ ರಿಪೋರ್ಟ್ ಬಗ್ಗೆಯೂ ಪ್ರಸ್ತಾಪಿಸಿಲ್ಲ. ಹಾಗಾಗಿ, ಜಾರ್ಜ್ ರಾಜೀನಾಮೆ ಅಗತ್ಯವಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದೇವೆ ಎಂದರು. ರಾಜ್ಯದ ಕಾಂಗ್ರೆಸ್ ಸರ್ಕಾರದ ವರ್ಚಸ್ಸನ್ನು ಹಾಳು ಮಾಡಲು ರಾಜಕೀಯ ದುರುದ್ದೇಶದಿಂದ ಬಿಜೆಪಿ ಈ ವಿಚಾರವನ್ನು ರಾಜಕೀಯಗೊಳಿಸುತ್ತಿದೆ ಎಂದವರು ಬಿಜೆಪಿ ವಿರುದ್ಧ ಹರಿಹಾಯ್ದು ಈ ಪ್ರಕರಣದಿಂದ ರಾಜಕೀಯ ಲಾಭ ಪಡೆಯುವ ಬಿಜೆಪಿಯ ಪ್ರಯತ್ನ ಸಫಲವಾಗುವುದಿಲ್ಲ ಎಂದರು. ಸಿಓಡಿ ತನಿಖೆ ಸಂದರ್ಭದಲ್ಲಿ ಸಚಿವ ಜಾರ್ಜ್ ಸಚಿವ ಹುದ್ದೆಯಲ್ಲಿದ್ದರೆ ಪ್ರಭಾವ ಬೀರುತ್ತಾರೆ ಎಂಬ ಕಾರಣಕ್ಕೆ ರಾಜೀನಾಮೆ ಪೆಡಯಲಾಗಿತ್ತು. ಜಾರ್ಜ್ ಪ್ರಭಾವ ಬೀರಲು ಸಾಧ್ಯವೇ ಇಲ್ಲ. ಹಾಗಾಗಿ, ಅವರ ರಾಜೀನಾಮೆ ಅಗತ್ಯವಿಲ್ಲ ಎಂದು ಪ್ರತಿಪಾದಿಸಿದರು. ಸಿಬಿಐ ಕೇಂದ್ರ ಸರ್ಕಾರದ ಅಧೀನದಲ್ಲಿದೆ. ಹಾಗಾಗಿಯೇ ಈ ಪ್ರಕರಣವನ್ನು ತನ್ನ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಸಿಬಿಐನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಟೀಕಿಸಿದ ಅವರು, ಸಚಿವ ಜಾರ್ಜ್‌ರವರ ಹೆಸರು ಕೆಡಿಸಲು ಬಿಜೆಪಿ ರಾಜಕಾರಣ ನಡೆಸಿದೆ ಎಂದು ಹರಿಹಾಯ್ದರು. ಎಫ್‌ಐಆರ್ ದಾಖಲಿಸಿದ ತಕ್ಷಣ ರಾಜೀನಾಮೆ ನೀಡಬೇಕು ಎಂಬ ಬಿಜೆಪಿ ಆಗ್ರಹ ಸರಿಯಲ್ಲ. ಕೇಂದ್ರ ಸರ್ಕಾರದ ಸಚಿವ ಸಂಪುಟದಲ್ಲಿ ಎಫ್‌ಐಆರ್ ದಾಖಲಿಸಿರುವ ಸಚಿವರು ಇದ್ದಾರೆ 8 ಕೇಂದ್ರ ಸಚಿವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯ ಯೋಗಿನಾಥ್ ವಿರುದ್ಧವೂ ಪ್ರಕರಣವು ಇದೆ. ಅವರು ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತಿಲ್ಲವೇ ಎಂದುವರು ತಿರುಗೇಟು ನೀಡಿ ಹಾಗಾದರೆ ಇವರೆಲ್ಲ ಮೊದಲು ರಾಜೀನಾಮೆ ನೀಡಲಿ ಎಂದು ಸವಾಲು ಹಾಕಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: