ಕರ್ನಾಟಕಪ್ರಮುಖ ಸುದ್ದಿ

ಪ್ರಧಾನಿ ನರೇಂದ್ರ ಮೋದಿ ಧರ್ಮಸ್ಥಳ ಭೇಟಿ: ಬಿಗಿ ಭದ್ರತೆ, ಸಂಚಾರ ಮಾರ್ಗ ಬದಲು

ದಕ್ಷಿಣಕನ್ನಡ,(ಬೆಳ್ತಂಗಡಿ),ಅ.27-ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಅ.28, 29ಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಮಿಸಲಿರುವ ಹಿನ್ನೆಲೆಯಲ್ಲಿ ಧರ್ಮಸ್ಥಳದಲ್ಲಿ ಬಿಗಿ ಭದ್ರತೆಗೆ ವ್ಯವಸ್ಥೆ ಮಾಡಲಾಗಿದೆ.

ಅ.29ರಂದು ಉಜಿರೆಯಲ್ಲಿ ನಡೆಯುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಸಮಾವೇಶವನ್ನು ಉದ್ದೇಶಿಸಿ ಮೋದಿ ಭಾಷಣ ಮಾಡಲಿರುವ ಹಿನ್ನೆಲೆಯಲ್ಲಿ ವೇದಿಕೆ ಹಾಗೂ ಸಭಾಂಗಣ ನಿರ್ಮಾಣದ ತಯಾರಿ ಕಾರ್ಯ ಭರದಿಂದ ನಡೆಯುತ್ತಿದೆ. ಪ್ರಧಾನಮಂತ್ರಿಯವರ ವಿಶೇಷ ಭದ್ರತಾ ಪಡೆ ಎಸ್‌ಪಿಜಿ ಈಗಾಗಲೇ ಧರ್ಮಸ್ಥಳದಲ್ಲಿ ಬೀಡು ಬಿಟ್ಟಿದೆ.

ಸ್ಪೆಷಲ್‌ ಪ್ರೊಟೆಕ್ಷನ್‌ ಗ್ರೂಪ್‌ (ಎಸ್‌ಪಿಜಿ) ಪ್ರಮುಖ ಅಧಿಕಾರಿ ಎಮ್‌.ಪಿ.ಗುಪ್ತಾ ಸೇರಿದಂತೆ 11 ಅಧಿಕಾರಿಗಳ ತಂಡ ಉಜಿರೆ ಹಾಗೂ ಧರ್ಮಸ್ಥಳದಲ್ಲಿ ಸ್ಥಳ ಪರಿಶೀಲನೆ ನಡೆಸಿ ಭದ್ರತಾ ಕಾರ್ಯಗಳನ್ನು ನಡೆಸುತ್ತಿದೆ. ವೇದಿಕೆ ನಿರ್ಮಾಣ ಕಾರ್ಮಿಕರ ಮೇಲೆ ನಿಗಾ ಇರಿಸಲು ಪೊಲೀಸರನ್ನು ನೇಮಿಸಲಾಗಿದೆ.

ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ನಕ್ಸಲ್‌ ನಿಗ್ರಹ ದಳದವರು ಕನ್ಯಾಡಿ, ಧರ್ಮಸ್ಥಳ, ಉಜಿರೆ ಸುತ್ತಮುತ್ತ ಕೂಂಬಿಂಗ್‌ ನಡೆಸುತ್ತಿದ್ದು, ಎಲ್ಲಾ ಪರಿಸರವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಎಸ್‌ಪಿಜಿ ತಂಡವು ಉಜಿರೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ, ಸಂಘಟಕರ ಜತೆ ಸಮಾಲೋಚನಾ ಸಭೆ ನಡೆಸಿತು.

ಸಾರ್ವಜನಿಕರಿಗೆ ದೇವರ ದರ್ಶನಕ್ಕೆ ಸಮಯ ನಿಗದಿ:

ಧರ್ಮಸ್ಥಳಕ್ಕೆ ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ಅ.28ರಂದು ಶನಿವಾರ ರಾತ್ರಿ 9ರವರೆಗೆ ಹಾಗೂ ಭಾನುವಾರ ಅಪರಾಹ್ನ 2 ಗಂಟೆ ಬಳಿಕ ದೇವರ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶವಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ. ಭಾನುವಾರ ಬೆಳಗ್ಗೆ 7ರಿಂದ 9ರವರೆಗೆ ಧರ್ಮಸ್ಥಳದಿಂದ ಉಜಿರೆವರೆಗೆ ರಸ್ತೆ ಮೂಲಕ ವಾಹನ ಸಂಚಾರಕ್ಕೆ ಮುಕ್ತ ಅವಕಾಶವಿದ್ದು, ಬಳಿಕ ಪ್ರಧಾನಿ ನಿರ್ಗಮನದವರೆಗೆ ಅವಕಾಶವಿರುವುದಿಲ್ಲ. ಭಕ್ತಾದಿಗಳು ಹಾಗೂ ಸಾರ್ವಜನಿಕರು ಇದನ್ನು ಗಮನಿಸಿ ಸಹಕರಿಸುವಂತೆ ವಿನಂತಿಸಲಾಗಿದೆ.

ಉಜಿರೆಯಲ್ಲಿ ಸಭಾ ವೇದಿಕೆ, ಸಭಾಂಗಣ ನಿರ್ಮಾಣ:

ಉಜಿರೆಯ ಶ್ರೀ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಬೆಂಗಳೂರಿನಿಂದ ಆಗಮಿಸಿರುವ ಕಾರ್ಮಿಕರು ಬೃಹತ್‌ ಜರ್ಮನ್‌ ಮಾದರಿ ಚಪ್ಪರದ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ. ಕ್ರೇನ್‌ಗಳ ಸಹಾಯದಿಂದ ಬೃಹತ್‌ ತೊಲೆಗಳನ್ನು ಅಳವಡಿಸುವ ಕಾರ್ಯ ನಡೆಯುತ್ತಿದೆ. 200ಕ್ಕೂ ಹೆಚ್ಚು ಕಾರ್ಮಿಕರು ದುಡಿಯುತ್ತಿದ್ದಾರೆ. ಇಲ್ಲಿನ ಕ್ಷಣ ಕ್ಷಣದ ಬೆಳವಣಿಗೆಗಳನ್ನು ಗಮನಿಸಲಾಗುತ್ತದೆ. ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಲಾಗುತ್ತದೆ ಎಂದು ಎಸ್‌ಪಿಜಿಯ ಅರವಿಂದ್‌ ತಿಳಿಸಿದ್ದಾರೆ.

ವಿಶೇಷ ವೇದಿಕೆ, ಪಿಎಂಒ ಕಚೇರಿ

100×30 ಅಡಿಯ ಮುಖ್ಯ ಸಭಾ ವೇದಿಕೆ ಚಪ್ಪರ, ಅದೊರಳಗೆ 40×30 ಅಡಿ ಕಾರ್ಯಕ್ರಮ ನಡೆಯುವ ವೇದಿಕೆ ನಿರ್ಮಿಸಲಾಗುತ್ತಿದೆ. ವೇದಿಕೆಯ ಪಕ್ಕದಲ್ಲಿ ಎರಡು ಕಚೇರಿಗಳನ್ನು ತೆರೆಯಲಾಗುತ್ತದೆ. ಒಂದು ಪ್ರಧಾನಿಯವರಿಗಾಗಿ 20×20 ಅಡಿ ಚಪ್ಪರ ಹಾಗೂ ಇನ್ನೊಂದು ಪ್ರಧಾನಿ ಕಚೇರಿ(ಪಿಎಂಒ)ಗಾಗಿ 20×20 ಅಡಿ ಕಚೇರಿ ತೆರೆಯಲಾಗುತ್ತದೆ. ವೇದಿಕೆಯ ಬಳಿ ಬ್ಯಾಕ್‌ ಆಫೀಸ್‌, 60 ಅಡಿ ಅಂತರದಲ್ಲಿ ಡಿ ಜೋನ್‌ ನಿರ್ಮಿಸಲಾಗುತ್ತಿದೆ. ಅಲ್ಲಿ ಬ್ಯಾರಿಕೇಡ್‌ ಹಾಕಲಾಗುತ್ತದೆ. ವೇದಿಕೆಯ ಮುಂಭಾಗ ಪೆಂಡಾಲ್‌, ಬದಿಗಳಲ್ಲಿ ಹಾಕಲಾಗುವ ಪೆಂಡಾಲ್‌ಗಳಲ್ಲಿ 35 ಸಾವಿರ ಆಸನಗಳನ್ನು ಹಾಕಲಾಗುತ್ತದೆ. ಮೈದಾನ ಪ್ರವೇಶಿಸಲು ನಾಲ್ಕು ಪ್ರವೇಶದ್ವಾರಗಳು ಇರುತ್ತವೆ ಎಂದು ತಿಳಿದುಬಂದಿದೆ.

ಭದ್ರತೆಗೆ 2,500 ಪೊಲೀಸರು:

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯ ಹಿನ್ನೆಲೆಯಲ್ಲಿ ಉಜಿರೆ ಹಾಗೂ ಧರ್ಮಸ್ಥಳದಲ್ಲಿ ವ್ಯಾಪಕ ಭದ್ರತೆಗೆ ಜಿಲ್ಲಾಡಳಿತ ಸಿದ್ಧತೆ ನಡೆಸಿದ್ದು, ಸುಮಾರು 2,500 ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗುತ್ತಿದೆ. ಧರ್ಮಸ್ಥಳ ಮತ್ತು ಉಜಿರೆ ಹೆಲಿಪ್ಯಾಡ್‌ ಹಾಗೂ ಧರ್ಮಸ್ಥಳದಿಂದ ಉಜಿರೆ ಮಾರ್ಗದಲ್ಲಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗುತ್ತಿದೆ. ಸಮಾವೇಶ ನಡೆಯುವ ಸ್ಥಳದಲ್ಲಿ ಪೊಲೀಸ್‌ ವಿಶೇಷ ಕಂಟ್ರೋಲ್‌ ರೂಂ ತೆರೆಯಲಾಗುತ್ತಿದ್ದು, 16ಕ್ಕೂ ಹೆಚ್ಚು ಸಿಸಿ ಕ್ಯಾಮೆರಾ ಅಳವಡಿಸಲಾಗುತ್ತದೆ. ನೆರೆಯ ಜಿಲ್ಲೆಗಳಿಂದ ಪೊಲೀಸರನ್ನು ಕರೆಸಲಾಗಿದ್ದು, ಶುಕ್ರವಾರ ಸಂಜೆಯೊಳಗೆ ಪೊಲೀಸ್‌ ಪಡೆ ಧರ್ಮಸ್ಥಳಕ್ಕೆ ಆಗಮಿಸಲಿದೆ ಎಂದು ದ.ಕ.ಜಿಲ್ಲಾ ಎಸ್ಪಿ ಸುಧೀರ್‌ ಕುಮಾರ್‌ ರೆಡ್ಡಿ ತಿಳಿಸಿದ್ದಾರೆ.

ಲಕ್ಷಕ್ಕೂ ಹೆಚ್ಚು ಜನ ಪಾಲ್ಗೊಳ್ಳುವ ನಿರೀಕ್ಷೆ:

‍ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಮುಕ್ತವಾಗಿ ಪಾಲ್ಗೊಳ್ಳಬಹುದಾಗಿದ್ದು, ಗ್ರಾಮಾಭಿವೃದ್ಧಿ ಯೋಜನೆಯ ಸ್ವ ಸಹಾಯ ಸಂಘಗಳ ಸದಸ್ಯರಿಗೆ ರುಪೇ ಕಾರ್ಡ್‌ ವಿತರಿಸುವ ಈ ಕಾರ್ಯಕ್ರಮದಲ್ಲಿ ಲಕ್ಷಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ಮಾಜಿ ವಿಧಾನ ಪರಿಷತ್‌ ಸದಸ್ಯ ಕೆ. ಮೋನಪ್ಪ ಭಂಡಾರಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಡಿ.ವಿ. ಸದಾನಂದ ಗೌಡ, ಅನಂತ ಕುಮಾರ್‌, ಅನಂತ ಕುಮಾರ್‌ ಹೆಗಡೆ, ಸಂಸದ ನಳಿನ್‌ ಕುಮಾರ್‌ ಕಟೀಲು ಮತ್ತು ಇತರ ಸಂಸದರು, ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಮತ್ತು ಇತರ ನಾಯಕರು, ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.

ವಾಹನ ಸಂಚಾರ ಮಾರ್ಗ ಬದಲಾವಣೆ:

ಅ.29 ರಂದು ಬೆಳಿಗ್ಗೆ 9 ಗಂಟೆಯಿಂದ ಪ್ರಧಾನಿ ನಿರ್ಗಮಿಸುವವರೆಗೆ ಉಜಿರೆ ಪೇಟೆಯ ದ್ವಾರದಿಂದ ಧರ್ಮಸ್ಥಳದವರೆಗೆ ಯಾವುದೇ ವಾಹನಗಳಿಗೆ ಪ್ರವೇಶ ಇರುವುದಿಲ್ಲ. ಬದಲಿ ರಸ್ತೆಗಳಲ್ಲಿ ಬರಬೇಕಾಗುತ್ತದೆ. ಶಿಶಿಲ, ಕೊಕ್ಕಡ ಕಡೆಯಿಂದ ಬರುವವರು ಧರ್ಮಸ್ಥಳದ ಕಲ್ಲೇರಿ ತನಕ ಬಂದು ಅಲ್ಲಿಂದ ಮುಂಡ್ರುಪ್ಪಾಡಿ, ಮುಂಡಾಜೆ ಮಾರ್ಗವಾಗಿ ಉಜಿರೆಗೆ ಬರಬೇಕು. ಉಡುಪಿ, ಕಾರ್ಕಳ, ಮೂಡುಬಿದ್ರೆಯಿಂದ ಬೆಂಗಳೂರಿಗೆ ಹೋಗುವವರು ಗುರುವಾಯನಕೆರೆ, ಉಪ್ಪಿನಂಗಡಿ ಮಾರ್ಗವಾಗಿ ತೆರಳಬೇಕು. ಕಾರ್ಯಕ್ರಮಕ್ಕೆ ಆಗಮಿಸುವವರು ಸಭಾ ಕಾರ್ಯಕ್ರಮಕ್ಕಿಂತ 2 ಗಂಟೆ ಮುಂಚಿತವಾಗಿ ಸಭಾಂಗಣದಲ್ಲಿ ಹಾಜರಿರಬೇಕು.

ಪಾರ್ಕಿಂಗ್‌ ವ್ಯವಸ್ಥೆ:

ಬೆಳ್ತಂಗಡಿ ಕಡೆಯಿಂದ ಬರುವವರು ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಳದ ಬಳಿ ಹಾಗೂ ಬೆಳಾಲು ಕ್ರಾಸ್‌ನ ತುಳು ಗ್ರಾಮದಲ್ಲಿ ಪಾರ್ಕಿಂಗ್‌ ಗೆ ವ್ಯವಸ್ಥೆ ಮಾಡಲಾಗಿದೆ. ಉಜಿರೆ ದ್ವಾರದಿಂದ ಎಲ್ಲರೂ ನಡೆದುಕೊಂಡೇ ಸಭಾಂಗಣಕ್ಕೆ ಬರಬೇಕಾಗುತ್ತದೆ.

ಪ್ರಧಾನಿಯವರ ದಿನಚರಿ:

ಬೆಳಿಗ್ಗೆ 7.30 ಕ್ಕೆ ದೆಹಲಿ ವಿಮಾನ ನಿಲ್ದಾಣದಿಂದ ಪ್ರಯಾಣ, 10.15 ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮನ, 10.20ಕ್ಕೆ ಮಂಗಳೂರಿನಿಂದ ಹೆಲಿಕಾಪ್ಟರ್‌ನಲ್ಲಿ ಧರ್ಮಸ್ಥಳಕ್ಕೆ ಪ್ರಯಾಣ, 10.50ಕ್ಕೆ ಧರ್ಮಸ್ಥಳ ಹೆಲಿಪ್ಯಾಡ್‌ ಗೆ ಆಗಮನ, 11.00ಕ್ಕೆ ಧರ್ಮಸ್ಥಳ ಶ್ರೀ ಮಂಜುನಾಥಸ್ವಾಮಿ ದೇವಸ್ಥಾನಕ್ಕೆ ಆಗಮನ, 11 ರಿಂದ 11.30 ರವರೆಗೆ ಶ್ರೀ ಮಂಜುನಾಥ ಸ್ವಾಮಿ ದರ್ಶನ ಹಾಗೂ ಪೂಜೆ, 11.35ಕ್ಕೆ ಧರ್ಮಸ್ಥಳದ ರಸ್ತೆಯ ಮೂಲಕ ಉಜಿರೆಗೆ ಪಯಣ, 11.45ಕ್ಕೆ ಉಜಿರೆಗೆ ಆಗಮನ, 11.45 ರಿಂದ 12.45 ರವರೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮದಲ್ಲಿ ಭಾಗವಹಿಸುವಿಕೆ.

ಮಧ್ಯಾಹ್ನ 12ಕ್ಕೆ ಉಜಿರೆಯಿಂದ ಧರ್ಮಸ್ಥಳಕ್ಕೆ ರಸ್ತೆ ಮೂಲಕ ಪ್ರಯಣ, 1ಕ್ಕೆ ಧರ್ಮಸ್ಥಳ ಹೆಲಿಪ್ಯಾಡ್‌ನಿಂದ ನಿರ್ಗಮನ, 1.05ಕ್ಕೆ ಧರ್ಮಸ್ಥಳದಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಪ್ರಯಾಣ, 1.35 ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮನ, 1.40ಕ್ಕೆ ಉಪಾಹಾರ, ಬೆಂಗಳೂರಿಗೆ ಪ್ರಯಣ. (ವರದಿ-ಎಸ್.ಎನ್, ಕೆಸಿಐ, ಎಂ.ಎನ್)

 

 

 

Leave a Reply

comments

Related Articles

error: