ಮೈಸೂರು

ಸಾಂಸ್ಕೃತಿಕ ಕಲೆಗಳ ಮೂಲಕ ಕನ್ನಡವನ್ನು ಬೆಳೆಸಿ : ರಾಮೇಶ್ವರಿ ವರ್ಮ

ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಕನ್ನಡವನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಬೇಕು. ಎಲ್ಲಾ ಶಾಲೆಗಳಲ್ಲೂ ಒಂದರಿಂದ ಹತ್ತನೇ ತರಗತಿಯರೆಗೆ ಕನ್ನಡ ನಾಟಕ, ಹಾಡು, ಯಕ್ಷಗಾನವನ್ನು ಕಲಿಸಿದಾಗ ಬಾಲ್ಯದಿಂದಲೇ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆಯ ಮೇಲೆ ಅಭಿಮಾನ ಮೂಡುತ್ತದೆ ಎಂದು ಹಿರಿಯ ರಂಗ ಕಲಾವಿದೆ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ರಾಮೇಶ್ವರಿ ವರ್ಮ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯ, ಗಾನಭಾರತಿ ವೀಣೆ ಶೇಷಣ್ಣ ಭವನದಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಯಕ್ಷ ಮಂಜುಷಾ, ಕುಳಾಯಿ, ಮಂಗಳೂರು ಇವರ ಸಹಯೋಗದಲ್ಲಿ  ನಡೆದ ಯಕ್ಷಗಾನ ತಾಳಮದ್ದಳೆ- ಶರಸೇತು ಬಂಧನ – ಯತಿಪೂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

“ಕನ್ನಡ ಭಾಷೆಯನ್ನು  ಪ್ರಾಥಮಿಕ ಹಂತದಲ್ಲಿಯೇ ಶಿಕ್ಷಣ ಮಾಧ‍್ಯಮವನ್ನಾಗಿ ಮಾಡುವುದರ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಕನ್ನಡ ಭಾಷೆಯನ್ನು ಬೆಳೆಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ಆಂದೋಲನವನ್ನು ಆದಷ್ಟು ಬೇಗ ಕೈಗೆತ್ತಿಕೊಂಡು ಕನ್ನಡವನ್ನು ಉಳಿಸೋಣ ಎಂದು ಮನವಿ ಮಾಡಿದರು. ಹಿಂದೆ ರಂಗಭೂಮಿಯಲ್ಲಿ ಮಹಿಳೆಯರಿಗೆ ಅವಕಾಶಗಳು ಕಡಿಮೆ ಇದ್ದವು. ಆದರೆ ಇಂದು ಮಹಿಳೆಯರು  ಅಲ್ಲಿನ ಎಲ್ಲಾ ಬೇಲಿಗಳನ್ನು ತೊಡೆದು ಹಾಕಿ ಯಕ್ಷಗಾನ, ತಾಳಮದ್ದಳೆ ಮುಂತಾದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಾಧನೆ ಮಾಡುತ್ತಿರುವುದು ಸಂತಸದ ವಿಚಾರವಾಗಿದೆ ಎಂದರು. ಗಂಗೂಬಾಯಿ ಹಾನಗಲ್ ರಂತೆಯೇ ಎಲ್ಲರೂ ಸಹ ಸಾಧನೆ ಮಾಡಿ ಹೆಸರು ಪಡೆಯಬೇಕೆಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು”.

ಈ ಸಂದರ್ಭ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಸರ್ವಮಂಗಳಾ ಶಂಕರ್. ಕುಲಸಚಿವ ಡಾ. ನಿರಂಜನ ವಾನಳ್ಳಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: