ದೇಶಪ್ರಮುಖ ಸುದ್ದಿ

500, 1000 ನೋಟುಗಳು ರದ್ದು: ನೋಟು ಬದಲಾಯಿಸಿಕೊಳ್ಳಲು 50 ದಿನ ಕಾಲಾವಕಾಶ

modi-webದೇಶದಲ್ಲಿ ಕಾಳಧನ ಮತ್ತು ನಕಲಿ ನೋಟುಗಳ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ 500 ಮತ್ತು 1000 ರು. ಮುಖಬೆಲೆಯ ನೋಟುಗಳ ಮುದ್ರಣ ಮತ್ತು ಚಲಾವಣೆಯನ್ನು ನಿರ್ಬಂಧಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಮಂಗವಾರ ರಾತ್ರಿ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಮಧ್ಯರಾತ್ರಿಯಿಂದಲೇ 500 ಮತ್ತು 1000 ರು. ನೋಟ್‍ಗಳು ಚಲಾವಣೆ ಸ್ಥಗಿತಗೊಳ್ಳಲಿದೆ. ಅವುಗಳ ಮೌಲ್ಯ ಪೇಪರ್‍ಗೆ ಸಮ. 100, 50, 20, 10, 2 ಮತ್ತು 1 ರು. ಚಲಾವಣೆಯಲ್ಲಿರಲಿದೆ. ಕೆಲವೇ ದಿನಗಳಲ್ಲಿ 2000 ಮತ್ತು 500 ರು.ಗಳ ಅತಿ ವೈಜ್ಞಾನಿಕ ನೋಟುಗಳನ್ನು ಬಿಡುಗಡೆ ಮಾಡುತ್ತೇವೆ. ಸಾರ್ವಜನಿಕರು ತಮ್ಮಲ್ಲಿರುವ 500 ಮತ್ತು 1000ರು. ನೋಟುಗಳನ್ನು ಬದಲಿಸಿಕೊಳ್ಳಲು ಹಲವು ಅವಕಾಶಗಳನ್ನು ಒದಗಿಸಲಾಗಿದ್ದು, ಯಾರೂ ಆತಂಕಪಡಬೇಕಾಗಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಬುಧವಾರ ಮತ್ತು ಗುರುವಾರ ದೇಶಾದ್ಯಂತ ಎಲ್ಲ ಎಟಿಎಂಗಳ ಕಾರ್ಯಾಚರಣೆ ಸ್ಥಗಿತಗೊಳ್ಳಲಿದ್ದು, ಬ್ಯಾಂಕ್‍ನಲ್ಲಿ ಯಾವುದೇ ವ್ಯವಹಾರ ಇರುವುದಿಲ್ಲ. ಬ್ಯಾಂಕ್ ಅಥವಾ ಪೋಸ್ಟ್‍ ಆಫೀಸ್‍ಗಳಲ್ಲಿ ಹಳೆಯ 500, 1000 ರು. ನೋಟುಗಳನ್ನು ವಿನಿಮಯ ಮಾಡಿಕೊಳ‍್ಳಲು ನ.10ರಿಂದ ಡಿ.30ರವರೆಗೆ ಅವಕಾಶವಿದೆ. ಪಾನ್‍ ಕಾರ್ಡ್, ವೋಟರ್‍ ಐಡಿ, ಆಧಾರ್ ಕಾರ್ಡ್ ತೋರಿಸಬೇಕು.  ಡಿ.30ರೊಳಗೆ ಹಣ ವಿನಿಮಯ ಸಾಧ್ಯವಾಗದಿದ್ದರೆ ಅಂಥವರು ಪ್ರಮಾಣ ಪತ್ರ ಒದಗಿಸಿ ಮಾ.31ರೊಳಗೆ ನೋಟುಗಳ ವಿನಿಮಯ ಮಾಡಿಕೊಳ್ಳಬಹುದು.

ಜನರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕಾಗಿ ಔಷಧ ಮಳಿಗೆಗಳು, ಸರಕಾರಿ ಹಾಲಿನ ಬೂತ್‍ಗಳು, ಕೇಂದ್ರ ಮತ್ತು ರಾಜ್ಯ ಸರಕಾರಿ ಸ್ವಾಮ್ಯದ ಸಹಕಾರಿ ಮಳಿಗೆಗಳು(ಜನತಾ ಬಜಾರ್, ಹಾಪ್‍ಕಾಮ್ಸ್‍ಗಳು) ಪೆಟ್ರೋಲ್, ಡೀಸೆಲ್ ಬಂಕ್‍ಗಳು ಗ್ಯಾಸ್‍ ಸ್ಟೇಷನ್, ಸರಕಾರಿ ಬಸ್, ರೈಲು, ವಿಮಾನ ಟಿಕೆಟ್ ಕೌಂಟರ್‍ಗಳು, ಚಿತಾಗಾರಗಳು, ರುದ್ರಭೂಮಿಗಳು ಇಲ್ಲಿ 3 ದಿನಗಳ(72) ಕಾಲ 500, 1000 ರು. ನೋಟುಗಳನ್ನು ಸ್ವೀಕರಿಸಲು ಅವಕಾಶ ಕಲ್ಪಿಸಲಾಗಿದೆ.

Leave a Reply

comments

Related Articles

error: