ಪ್ರಮುಖ ಸುದ್ದಿಮೈಸೂರು

ನೀರಿನ ಬಾಕಿ ಪಾವತಿಗೆ ವಾರದ ಗಡುವು: ತಪ್ಪಿದರೆ ಸಂಪರ್ಕ ಕಡಿತ- ಮೇಯರ್

ಒಂದು ವಾರದಲ್ಲಿ ನೀರಿನ ಬಾಕಿ ಶುಲ್ಕ ಪಾವತಿಸದಿದ್ದರೆ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಮೇಯರ್ ಬಿ.ಎಲ್.ಭೈರಪ್ಪ ಗಡುವು ನೀಡಿದ್ದಾರೆ.

ನಗರ ಪಾಲಿಕೆ ಹಳೇ ಕೌನ್ಸಿಲ್ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಸುಮಾರು 25 ವರ್ಷಗಳಿಂದ ಸಾರ್ವಜನಿಕರು ನೀರಿನ ಶುಲ್ಕವನ್ನು ಸಮರ್ಪಕವಾಗಿ ಪಾವತಿಸದ ಕಾರಣ ಈವರೆಗೆ 125 ಕೋಟಿ ರೂ. ಬಾಕಿ ಉಳಿದಿದೆ. ಇದರಿಂದ ಪೌರಕಾರ್ಮಿಕರಿಗೆ ವೇತನ ನೀಡಲೂ ಕಷ್ಟವಾಗುತ್ತಿದೆ. ಅಭಿವೃದ್ಧಿ ಕಾರ್ಯಗಳೂ ಸಾಧ್ಯವಾಗುತ್ತಿಲ್ಲ. ಆದ್ದರಿಂದ, ಈಗಾಗಲೇ ಮನೆ ಮನೆಗೆ ಕರಪತ್ರ ಹಂಚಿ ನೀರಿನ ಕಂದಾಯ ಪಾವತಿ ಮಾಡುವಂತೆ ಅರಿವು ಮೂಡಿಸಲಾಗಿದೆ ಎಂದು ತಿಳಿಸಿದರು.

ನಿರ್ದಾಕ್ಷಿಣ್ಯ ಕ್ರಮ: ಮನೆ ಬಳಕೆಗೆ ಅನಧಿಕೃತವಾಗಿ ಸಂಪರ್ಕ ಪಡೆದಿದ್ದರೆ ವಿದ್ಯುತ್ ಬಿಲ್ ನೀಡಿ ಸಕ್ರಮಗೊಳಿಸಿಕೊಳ್ಳಲು ಅವಕಾಶವಿದೆ. ಹಾಗೆಯೇ ನೀರಿನ ಶುಲ್ಕದ ಮೇಲಿನ ಬಡ್ಡಿ ಮನ್ನಾ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿದ್ದು ಆದೇಶ ಬರಬೇಕಿದೆ. ಆದಾಗ್ಯೂ, ಗ್ರಾಹಕರು ಬಡ್ಡಿರಹಿತವಾಗಿ ನೀರಿನ ಶುಲ್ಕವನ್ನು ಪಾವತಿಸಬಹುದು. ಆರ್ಥಿಕವಾಗಿ ತೊಂದರೆಯಿದ್ದವರಿಗೆ ಕಂತುಗಳಲ್ಲಿ ಪಾವತಿಸಲು ಅವಕಾಶ ನೀಡಲಾಗುವುದು. ಈಗಾಗಲೇ ಶುಲ್ಕ ಬಾಕಿ ಉಳಿದಿರುವ ವಾಣಿಜ್ಯ ಬಳಕೆ ನೀರಿನ ಸಂಪರ್ಕವನ್ನು ಕಡಿತಗೊಳಿಸುವ ಕಾರ್ಯ ಆರಂಭಿಸಲಾಗಿದೆ. ಹಾಗೆಯೇ ನೀರಿನ ಕಂದಾಯ ವಸೂಲಿ ಅಭಿಯಾನ ನಡೆಸಲಾಗಿರುವ ವಾರ್ಡ್ ಗಳ ಗ್ರಾಹಕರು ಒಂದು ವಾರದಲ್ಲಿ ಬಾಕಿ ಪಾವತಿಸದಿದ್ದರೆ ನಿರ್ದಾಕ್ಷಿಣ್ಯ ಕ್ರಮ ವಹಿಸಲಾಗುವುದು ಎಂದು ಹೇಳಿದರು.

ಪಾಲಿಕೆ ಅನುಮತಿ ಕಡ್ಡಾಯ: ರಿಂಗ್ ರಸ್ತೆಯ ಒಳಭಾಗದಲ್ಲಿನ ಎಲ್ಲ ಬಡಾವಣೆಗಳಲ್ಲಿ ಕಟ್ಟಡ ನಿರ್ಮಿಸಬೇಕಿದ್ದರೆ ಕಡ್ಡಾಯವಾಗಿ ನಗರ ಪಾಲಿಕೆಯಿಂದ ಅನುಮತಿ ಪಡೆಯಬೇಕು. ಪಾಲಿಕೆ ವ್ಯಾಪ್ತಿಯಲ್ಲಿರುವ ಮುಡಾ ಹಾಗೂ ಖಾಸಗಿ ಬಡಾವಣೆಗಳಿಗೆ ಅನ್ವಯವಾಗುತ್ತದೆ ಎಂದು ಮೇಯರ್ ಭೈರಪ್ಪ ಇದೇ ವೇಳೆ ತಿಳಿಸಿದರು.

Leave a Reply

comments

Related Articles

error: