ಕರ್ನಾಟಕಪ್ರಮುಖ ಸುದ್ದಿ

ಭೀಕರ ಅಪಘಾತ: ದಿಬ್ಬಣಕ್ಕೆ ಹೊರಟ್ಟಿದ್ದ 12 ಮಂದಿ ಸಾವು; 40 ಕ್ಕೂ ಹೆಚ್ಚು ಮಂದಿಗೆ ಗಾಯ

ಮಂಡ್ಯ,ಅ.30-ಸಂಭ್ರಮ ಸಡಗರದಿಂದ ತುಂಬಿದ್ದ ಮದುವೆ ಮನೆಯಲ್ಲಿ ಅಪಘಾತದ ಸುದ್ದಿ ಶೋಕ ಮುಡುಗಟ್ಟುವಂತೆ ಮಾಡಿತ್ತು. ಮದುವೆಗೆ ಬಂಧುಗಳನ್ನು ಕರೆದೊಯ್ಯುತ್ತಿದ್ದ ಕ್ಯಾಂಟರ್ (ಗೂಡ್ಸ್ ವಾಹನ) ಭೀಕರ ಅಪಘಾತಕ್ಕೀಡಾಗಿ 12 ಮಂದಿ ಮೃತಪಟ್ಟಿದ್ದು, 40 ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ತಾಲೂಕಿನ ಕೆಸ್ತೂರು ಬಳಿಯ ಮಾಚಹಳ್ಳಿ ಗೇಟ್ ಬಳಿ ಭಾನುವಾರ ರಾತ್ರಿ ನಡೆದಿದೆ.

ಪೂಜಾ(16), ಮಾದಮ್ಮ (60), ಬೀರಮ್ಮ (65), ಪಾರ್ವತಮ್ಮ (60), ಜಯಮ್ಮ (55), ಶಿವಣ್ಣ(60), ಸೋನು(5), ರೇಣುಕಮ್ಮ (60), ಕಮಲಮ್ಮ (55), ಕರಿಯಪ್ಪ (50), ರೇವಮ್ಮ (55), ಸಣ್ಣಮ್ಮ (60) ಮೃತಪಟ್ಟವರು.

ಮೃತರು ಮತ್ತು ಗಾಯಾಳುಗಳೆಲ್ಲ ಯಡಗನಹಳ್ಳಿ ಹಾಗೂ ಅವಸರದಹಳ್ಳಿಯ ನಿವಾಸಿಗಳು. ಮದ್ದೂರಿನ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಮದುವೆಗೆ ಕ್ಯಾಂಟರ್ ನಲ್ಲಿ ತೆರಳುತ್ತಿದ್ದರು. ಶಿವಣ್ಣ ಹಾಗೂ ಪೂಜಾ ಸ್ಥಳದಲ್ಲಿಯೇ ಮೃತಪಟ್ಟರೆ, ಉಳಿದ 10 ಮಂದಿಯನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.

ಮದ್ದೂರು ಆಸ್ಪತ್ರೆಯಲ್ಲಿ ೫ ಮಂದಿ, ಮಂಡ್ಯ ಮಿಮ್ಸ್ ನಲ್ಲಿ ೬ ಮಂದಿ ಮತ್ತು ಮೈಸೂರು ಕೆ.ಆರ್.ಆಸ್ಪತ್ರೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಮೃತ ಪೂಜಾ ಮದುವೆಯಾಗುತ್ತಿದ್ದ ವಧುವಿನ ಸಹೋದರಿ.

ಸರಳವಾಗಿ ನೆರವೇರಿದ ಮದುವೆ: ಅಪಘಾತದ ಹಿನ್ನೆಲೆಯಲ್ಲಿ ಸೋಮವಾರ ಅದ್ಧೂರಿಯಾಗಿ ನಡೆಯಬೇಕಿದ್ದ ಮದುವೆಯನ್ನು ಕುಟುಂಬಸ್ಥರು ಭಾನುವಾರ ರಾತ್ರಿಯೇ ಸರಳವಾಗಿ ನೆರವೇರಿಸಿದ್ದಾರೆ. ಅಪಘಾತದಲ್ಲಿ ವಧುವಿನ ಸಹೋದರಿ ಕೂಡ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಎರಡು ಕುಟುಂಬದವರು ಸೇರಿ ರಾತ್ರಿಯೇ ಮದುವೆ ಮುಗಿಸಿದ್ದಾರೆ. ಮದುವೆ ಬಳಿಕ ವಧು ಬೋರಮ್ಮ ಹಾಗೂ ವರ ಚಂದ್ರು ಆಸ್ಪತ್ರೆಗೆ ದೌಡಾಯಿಸಿ ಗಾಯಾಳುಗಳನ್ನು ಕಂಡು ರೋಧಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು. (ವರದಿ-ಕೆ.ಎಸ್, ಎಂ.ಎನ್)

 

Leave a Reply

comments

Related Articles

error: