ಮೈಸೂರು

ವ್ಯಾಪಾರ ಪೈಪೋಟಿ: ಹುಣಸೂರಿನಲ್ಲಿ ನೆರೆಹೊರೆಯವರ ಹೊಯ್-ಕೈ

dandale-2ಇನ್ಮುಂದೆ ಹೊಸ ಕೆಲಸ ಮಾಡ್ತೀನಿ ಅಂತ ಸ್ವಂತ ದುಡಿಮೆ ಮಾಡಲು ಯೋಚನೆ ಮಾಡ್ತಾ ಇದ್ದೀರಾ..? ಹಾಗಿದ್ರೆ, ಸ್ವಲ್ಪ ಎಚ್ಚರವಾಗಿರಿ. ಯಾಕಂದ್ರೆ.. ನೀವು ಹೊಸದಾಗಿ ಕೆಲಸ ಮಾಡ್ತೀನಿ, ಸ್ವಂತವಾಗಿ ನನ್ನ ಕಾಲ ಮೇಲೆ ನಿಂತುಕೊಳ್ಳುತ್ತೇನೆ ಎಂದರೆ, ಸುಖಾಸುಮ್ಮನೆ ಕಾಲು ಕೆರೆದು ಜಗಳಕ್ಕೆ ಬರ್ತಾರೆ. ಮಾತ್ರವಲ್ಲ ಮನೆಗೆ ನುಗ್ಗಿ ಮನಬಂದತೆ ಹೊಡೆಯುತ್ತಾರೆ. ಅರೆ! ಇದೆನಪ್ಪಾ ಅಂತ ಹುಬ್ಬೇರಿಸಬೇಡಿ. ಅಚ್ಚರಿ ಆದರೂ ಇದು ಸತ್ಯ. ಈ ಅಚ್ಚರಿಯ ಘಟನೆ ನಡೆದಿರೋದು ಮೈಸೂರು ಜಿಲ್ಲೆ, ಹುಣಸೂರು ಪಟ್ಟಣದ ರತ್ನಪುರಿ ಮುಖ್ಯರಸ್ತೆಯಲ್ಲಿ.

ಆಗಿದ್ದಿಷ್ಟು: ಇಲ್ಲಿನ ಶಿವರಾಮು ಎಂಬುವವರ ಮಗ ಸಂತೋಷ್ ಶ್ರೀ ಚೌಡೇಶ್ವರಿ ಸೆಲ್ ಜೋ಼ನ್ ಎಂಬ ಮೊಬೈಲ್ ಅಂಗಡಿಯನ್ನು ಹೊಸದಾಗಿ ಪ್ರಾರಂಭ ಮಾಡಿದ್ದಾರೆ. ಇವರ ಮನೆಯ ಮುಂಭಾಗದಲ್ಲಿ ರಮೇಶ್ ಎಂಬುವವರ ಮನೆಯಿದ್ದು, ಅವರ ಮಗ ಅಶೋಕ್ ಕೂಡ ಚಿಕ್ಕವೆಂಕಟೇಗೌಡ ಸೆಲ್ ಜೋನ್ ಎಂಬ ಮೊಬೈಲ್ ಅಂಗಡಿ ನಡೆಸುತ್ತಿದ್ದಾರೆ. ಈ ವೇಳೆ ಹೊಸದಾಗಿ ಪ್ರಾರಂಭವಾಗಿರುವ ಸಂತೋಷ್ ಅಂಗಡಿಯಲ್ಲಿ ವ್ಯಾಪಾರ ತುಂಬಾ ಚೆನ್ನಾಗಿ ನಡೆದಿದೆ. ಇದರಿಂದ ಕುಪಿತಗೊಂಡ ರಮೇಶ್ ಅವರ ಪುತ್ರ ಅಶೋಕ್ ಅವರು ಸ್ನೇಹಿತರನ್ನು ಕರೆಸಿ ಜಗಳ ಮಾಡಿಸುತ್ತಿದ್ದ ಎನ್ನಲಾಗಿದೆ. ಇದರಿಂದ ಬೆದರಿದ ಶಿವರಾಮು ಅವರಿಗೆ ಮಗ ವಿಷಯ ಮುಟ್ಟಿಸಿದ್ದಾನೆ. ಈ ವೇಳೆ ಈ ಜಗಳವೆಲ್ಲ ಏಕೆ ಎಂದು ಸಾಕಷ್ಟು ಬಾರಿ ಶಿವರಾಮು ಅವರು ರಮೇಶ್ ಗೆ ಹೇಳಿದ್ದರಂತೆ. ಆದರೂ ಕೇಳದೆ ಜಗಳ ಮಾಡಿದ್ದಾರೆ.

ಹೆಚ್ಚಾಯ್ತು ವ್ಯಾಪಾರ, ಜೋರಾಯ್ತು ಗಲಾಟೆ…

ಸಣ್ಣ-ಪುಟ್ಟ ಮಾತುಕತೆ ಗಲಾಟೆ ನಡೆಯುತ್ತಿದ್ದ ಜಾಗದಲ್ಲೇ ಇವತ್ತು ದೊಡ್ಡ ಮಟ್ಟದ ಗಲಾಟೆಯಾಗಿದೆ. ದಿನೇದಿನೇ ಸಂತೋಷ್ ಅಂಗಡಿಯಲ್ಲಿ ವ್ಯಾಪಾರ ಜೋರಾಗಿದೆ. ಇದನ್ನ ಸಹಿಸದೆ ರಮೇಶ್ ಹಾಗೂ ಮಕ್ಕಳ ಸ್ನೇಹಿತರು ಏಕಾಏಕಿ ರಾತ್ರಿ ವೇಳೆಯಲ್ಲೇ ಮನೆಗೆ ನುಗ್ಗಿ ದೊಣ್ಣೆ, ಕಲ್ಲು, ಮಚ್ಚುಗಳಿಂದ ಹಲ್ಲೆ ನಡೆಸಿ, ನನ್ನ ಅಂಗಡಿಗೆ ಪೈಪೋಟಿ ಕೊಡ್ತೀಯಾ ಎಂದು ಮನೆಯ ಗೇಟ್ ಒದ್ದು, ಶಿವರಾಮು ಅವರ ಕಾರಿನ ಮೇಲೆ ಕಲ್ಲು ಎತ್ತಿಹಾಕಿ ರಾದ್ಧಾಂತ ಮಾಡಿದ್ದಾರೆ. ಈ ವೇಳೆ ಅಕ್ಕ-ಪಕ್ಕದ ಜನರು ಕೂಡ ಇದನ್ನ ತಡೆಯಲು ಬಂದರೂ ಯಾರೂ ಕೂಡ ಸಮಾಧಾನದಲ್ಲಿ ಕೇಳುವ ಸೌಜನ್ಯವೂ ಇಲ್ಲದೇ ಮನಬಂದಂತೆ ಹಲ್ಲೆ ನಡೆಸಿರುವ ದೃಶ್ಯ ಸಿಸಿಟಿವಿ ಯಲ್ಲಿ ಸೆರೆಯಾಗಿದೆ.

ಮನಬಂದಂತೆ ಹೊಡೆದರು: ಮನ ಬಂದಂತೆ ಹೆಂಗಸರು-ಮಕ್ಕಳೆನ್ನದೆ ದೊಣ್ಣೆಗಳಿಂದ, ಕಲ್ಲಿನಿಂದ ಹಲ್ಲೆ ನಡೆಸಿರುವುದಾಗಿ ಶಿವರಾಮು ಅವರು “ಸಿಟಿಟುಡೆ”ಗೆ ತಿಳಿಸಿದ್ದಾರೆ. “ಸರ್, ಇಲ್ಲಿ ಪೈಪೋಟಿ ಏನೂ ಇಲ್ಲ. ನಮ್ಮ ಮಗ ಮನೆಯ ಪಕ್ಕದಲ್ಲೇ ಏನಾದರೂ ಕೆಲಸ ಮಾಡಿಕೊಂಡು ನಮ್ಮ ಕಣ್ಣ ಮುಂದಿರಲಿ ಎಂಬ ಆಸೆಗೆ ಮೊಬೈಲ್ ಅಂಗಡಿ ಮಾಡಿಕೊಟ್ಟೆವು ಅಷ್ಟೇ. ಆದರೆ, ಎದುರು ಮಳಿಗೆಯ ರಮೇಶ್ ಅವರು, ಗುಂಪು ಕಟ್ಟಿಕೊಂಡು ನನ್ನ ಪತ್ನಿ ಭಾರತಿಗೆ ಮಗನಿಗೆ ಮತ್ತು ನನಗೂ ಹೊಟ್ಟೆ ಭಾಗಕ್ಕೆ, ಕೆನ್ನೆಗೆ, ತಲೆ ಭಾಗಕ್ಕೆ ಹೊಡೆದು ರಾದ್ಧಾಂತ ಮಾಡಿದ್ದಾರೆ. ಎಲ್ಲವೂ ನಮ್ಮ ಮನೆಯ ಸಿಸಿಟಿವಿಯಲ್ಲೇ ರೆಕಾರ್ಡ್ ಆಗಿದೆ. ಈ ಸಂಬಂಧ ರಮೇಶ್, ನಾಗರಾಜು, ರಾಜೇಶ್, ಸುಧಾ, ಪ್ರಸನ್ನ, ಗಾಯಿತ್ರಿ, ಸೇರಿದಂತೆ ಏಳು ಮಂದಿ ವಿರುದ್ಧ ದೂರು ದಾಖಲಿಸಿದ್ದೇವೆ. ಒಟ್ಟಾರೆ, 18 ಮಂದಿ ನಮಗೆ ಹಲ್ಲೆ ನಡೆಸಿದರು ಅವರ ಮೇಲೂ ಸಹ ಪ್ರಕರಣ ದಾಖಲಿಸಿದ್ದೇವೆ” ಎಂದಿದ್ದಾರೆ.

dandale-1

ಪ್ರಕರಣ ದಾಖಲಿಸಿಕೊಂಡಿರುವ ಹುಣಸೂರು ಟೌನ್ ಪೊಲೀಸರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಇದೇ ವೇಳೆ ‘ಸಿಟಿಟುಡೆ’ಯೊಂದಿಗೆ ಮಾತನಾಡಿದ ಜಿಲ್ಲಾ ವರಿಷ್ಠಾಧಿಕಾರಿಗಳಾದ ರವಿ ಡಿ ಚೆನ್ನಣ್ಣನವರ್ ಅವರು, ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಈ ರೀತಿಯ ಘಟನೆ ಮರುಕಳಿಸಬಾರದು. ತಾಲೂಕು ಮಟ್ಟದಲ್ಲಿ ಎಲ್ಲರೂ ಸೌಹಾರ್ದ ಭಾವನೆಯಿಂದ ಇರಬೇಕು. ಎಲ್ಲರೂ ನಮ್ಮವರೇ ಎಂಬ ಭಾವನೆ ಮೂಡಬೇಕು ಎಂದು ಗಲಾಟೆ ಮಾಡಿಕೊಂಡವರಿಗೂ, ಜಿಲ್ಲೆಯ ಜನತೆಗೂ ‘ಸಿಟಿ ಟುಡೆ’ಯ ಮೂಲಕ ಕಿವಿಮಾತು ಹೇಳಿದ್ದಾರೆ.

ಹೊಟ್ಟೆ ಕಿಚ್ಚಿನಿಂದ ಹಲ್ಲೆ ನಡೆಸುವ ಬದಲು ಒಟ್ಟಾಗಿ ಕೂಡಿ ಬಾಳಿದರೆ ಎಲ್ಲರಿಗೂ ಒಳಿತು. ಮಾತ್ರವಲ್ಲ ಎಲ್ಲರೂ ನಮ್ಮವರೇ ಎಂಬ ವರಿಷ್ಠಾಧಿಕಾರಿಗಳ ಮಾತು ಇವರಿಗೆ ಸ್ಫೂರ್ತಿಯಾಗಿ, ಹಲ್ಲೆ ನಡೆಸಿದವರ ಮನಪರಿವರ್ತನೆಯೂ ಆಗಬೇಕಿದೆ.

~ ಸುರೇಶ್  ಎನ್.

Leave a Reply

comments

Related Articles

error: