ಕರ್ನಾಟಕ

ಬೆಳೆ ಸಮೀಕ್ಷೆ ಕಾರ್ಯ ತ್ವರಿತವಾಗಿ ಪೂರ್ಣಗೊಳಿಸಿ: ಜಿಲ್ಲಾಧಿಕಾರಿ ಬಿ.ರಾಮು

ಚಾಮರಾಜನಗರ,ಅ.30-ಜಿಲ್ಲೆಯಲ್ಲಿ ಕೈಗೊಳ್ಳಲಾಗಿರುವ ಬೆಳೆ ಸಮೀಕ್ಷೆ ಕಾರ್ಯವನ್ನು ನ.6ರೊಳಗೆ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಬಿ.ರಾಮು ಸೂಚನೆ ನೀಡಿದರು.

ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ನಡೆದ ಬೆಳೆ ಸಮೀಕ್ಷೆ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ಬೆಳೆ ಸಮೀಕ್ಷೆ ಕಾರ್ಯವು ಅತ್ಯಂತ ಮಹತ್ತರವಾಗಿದೆ. ಎಲ್ಲ ಭಾಗದಲ್ಲೂ ವ್ಯಾಪಕವಾಗಿ ಬೆಳೆ ಸಮೀಕ್ಷೆ ನಿಖರವಾಗಿ ನಡೆಯಬೇಕಿದೆ. ಸಮೀಕ್ಷೆ ಕಾರ್ಯಕ್ಕೆ ನಿಯೋಜಿತರಾಗಿರುವ ಕಂದಾಯ, ತೋಟಗಾರಿಕೆ, ಕೃಷಿ, ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದ ಇಲಾಖೆ ಅಧಿಕಾರಿ ಸಿಬ್ಬಂದಿ ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು ಎಂದರು.

ಬೆಳೆ ಸಮೀಕ್ಷೆ ಕರ್ತವ್ಯಕ್ಕೆ ತೊಡಗಿರುವ ಅಧಿಕಾರಿ ಸಿಬ್ಬಂದಿ ನಿಗದಿತ ಗುರಿ ಇಟ್ಟುಕೊಂಡು ಅದರಂತೆ ಕೆಲಸ ನಿರ್ವಹಿಸಿ ಸೂಚಿಸಲಾಗಿರುವ ತಂತ್ರಾಂಶದಲ್ಲಿ ಅಪ್‍ಲೋಡ್ ಮಾಡಬೇಕು. ಪ್ರತಿಯೊಬ್ಬರ ಕರ್ತವ್ಯ ನಿರ್ವಹಣೆಯನ್ನು ಗಮನಿಸಲಾಗುತ್ತದೆ. ಉತ್ತಮ ಸಾಧನೆ ಮಾಡಿದವರನ್ನು ಅಭಿನಂದಿಸಲಾಗುತ್ತದೆ ಎಂದರು.

ಉಪವಿಭಾಗಾಧಿಕಾರಿಗಳು ತಹಸಿಲ್ದಾರರು ಬೆಳೆ ಸಮೀಕ್ಷೆ ಕಾರ್ಯದಲ್ಲಿ ಎದುರಾಗಬಹುದಾದ ಸಮಸ್ಯೆಗಳಿಗೆ ಅಗತ್ಯ ಸಲಹೆ ಪರಿಹಾರ ನೀಡಲಿದ್ದಾರೆ. ಸಮೀಕ್ಷೆ ಕೆಲಸದ ಉಸ್ತುವಾರಿಯನ್ನು ನಿರ್ವಹಿಸಲಿದ್ದಾರೆ. ತಾಂತ್ರಿಕ ದೋಷ, ತೊಡಕುಗಳು ಕಂಡು ಬಂದಲ್ಲಿ ಜಿಲ್ಲಾ ಮಟ್ಟದ ತಂತ್ರಜ್ಞರು ಮಾರ್ಗದರ್ಶನ ಮಾಡಿ ಪರಿಹರಿಸಲಿದ್ದಾರೆ. ಹೀಗಾಗಿ ಯಾವುದೇ ಗೊಂದಲಕ್ಕೆ ಒಳಗಾಗದೇ ಸಮೀಕ್ಷೆ ಕಾರ್ಯವನ್ನು ಪೂರೈಸಬೇಕು ಎಂದು ತಿಳಿಸಿದರು.

ಆಪ್ ಆಧಾರಿತ ಬೆಳೆ ಸಮೀಕ್ಷೆಗೆ ಮೊಬೈಲ್ ಅವಶ್ಯಕತೆ ಇರುವವರಿಗೆ ಶೀಘ್ರವೇ ಪೂರೈಸಲಾಗುವುದು. ಈಗಾಗಲೇ ಮೊಬೈಲ್ ಹೊಂದಿದ್ದು ಕಾರ್ಯ ನಿರ್ವಹಿಸುತ್ತಿರುವವರು  ಹೆಚ್ಚು ಪ್ರದೇಶಗಳಿಗೆ ಭೇಟಿ ನೀಡಿ ತ್ವರಿತವಾಗಿ ಸಮೀಕ್ಷೆ ಕೆಲಸ ಮಾಡಬೇಕು. ಕೃಷಿ, ತೋಟಗಾರಿಕೆ ಹಾಗೂ ಗ್ರಾಮಪಂಚಾಯಿತಿ ಸಿಬ್ಬಂದಿ ಸಹಕಾರ ಪಡೆದು ಯಶಸ್ವಿಯಾಗಿ ನಿಗದಿತ ಕಾರ್ಯವನ್ನು ಪೂರ್ಣಗೊಳಿಸಬೇಕು ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಗಾಯತ್ರಿ ಮಾತನಾಡಿ ಸಮೀಕ್ಷೆ ವೇಳೆ ಬರಬಹುದಾದ ಎಲ್ಲ ತಾಂತ್ರಿಕ ಅಡಚಣೆಗೂ ಪರಿಹಾರವಿದೆ. ಯಾವುದೇ ಮಾಹಿತಿ ಬೇಕಿದ್ದರೂ ಹಿರಿಯ ಅಧಿಕಾರಿಗಳನ್ನು ಸಂರ್ಪಕಿಸಿ ಪರಿಹಾರ ಮಾಡಿಕೊಳ್ಳಬೇಕು. ದಿನನಿತ್ಯದ ಕಾರ್ಯ ಸಾಧನೆಯನ್ನು ಗಮನಿಸಲಾಗುತ್ತದೆ ಎಂದರು.

ಉಪವಿಭಾಗಾಧಿಕಾರಿ ಫೌಜಿಯ ತರನಂ, ಕೃಷಿ ಉಪನಿರ್ದೇಶಕರಾದ ಯೋಗೇಶ್,ತೋಟಗಾರಿಕೆ ಉಪನಿರ್ದೇಶಕರಾದ ಶಿವಪ್ರಸಾದ್, ತಹಶೀಲ್ಧಾರರು ಇತರರು ಹಾಜರಿದ್ದರು. (ವರದಿ-ವಿಎಸ್ಎಸ್, ಎಂ.ಎನ್)

Leave a Reply

comments

Related Articles

error: