ಕ್ರೀಡೆಪ್ರಮುಖ ಸುದ್ದಿ

ಫ್ರೆಂಚ್ ಓಪನ್ ಮುಡಿಗೇರಿಸಿಕೊಂಡ ಕಿದಂಬಿ ಶ್ರೀಕಾಂತ್

ಪ್ಯಾರಿಸ್,ಅ.30-ಕಳೆದ ವಾರವಷ್ಟೇ ಡೆನ್ಮಾರ್ಕ್ ಓಪನ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಭಾರತೀಯ ಕಿದಂಬಿ ಶ್ರೀಕಾಂತ್ ಮತ್ತೊಂದು ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಭಾನುವಾರ ನಡೆದ ಫ್ರೆಂಚ್ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಫೈನಲ್ ನಲ್ಲಿ ಜಪಾನ್ ನ ಕೆಂಟ ನಿಶಿಮೊಟೋ ಅವರನ್ನು 21-14, 21-13 ನೇರ ಗೇಮ್ ಗಳಿಂದ ಸೋಲಿಸಿದ ಕಿದಂಬಿ ಗೆಲುವಿನ ನಗೆ ಬೀರಿದರು.

ಇದಕ್ಕೂ ಮೊದಲು ನಡೆದ ಪುರುಷರ ಸಿಂಗಲ್ಸ್ ಮೊದಲ ಸೆಮಿಫೈನಲ್ ಪಂದ್ಯ ಆಲ್ ಇಂಡಿಯನ್ ಸ್ಪರ್ಧೆಯಾಗಿತ್ತು. ಇಲ್ಲಿ ಶ್ರೀಕಾಂತ್ ಪ್ರಣಯ್ ಅವರನ್ನು 14-21, 21-19, 21-18 ಅಂತರದಿಂದ ಸೋಲಿಸಿದರು.

ಈ ವರ್ಷ ಸೂಪರ್ ಸೀರೀಸ್ ಕೂಟಗಳಲ್ಲಿ ಐದನೇ ಬಾರಿ ಫೈನಲ್ ತಲುಪಿದ ಸಾಧನೆ ಮಾಡಿದ್ದ ಶ್ರೀಕಾಂತ್ ಸತತ ಎರಡನೇ ಪ್ರಶಸ್ತಿ ಗೆದ್ದ ಸಾಧನೆ ಮಾಡಿದರು. ಅವರು ಕಳೆದ ವಾರ ಡೆನ್ಮಾರ್ಕ್ ಓಪನ್ ಕೂಟದ ಪ್ರಶಸ್ತಿ ಜಯಿಸಿದ್ದರು. ಈಗಾಗಲೇ ಹ್ಯಾಟ್ರಿಕ್ ಪ್ರಶಸ್ತಿ ಜಯಿಸಿದ್ದ ಶ್ರೀಕಾಂತ್ ಇದೀಗ ಈ ಋತುವಿನಲ್ಲಿ ತನ್ನ ನಾಲ್ಕನೇ ಪ್ರಶಸ್ತಿ ಗೆದ್ದು ಸಂಭ್ರಮಿಸಿದರು. ಸದ್ಯ ಉತ್ತುಂಗ ಫಾರ್ಮ್ನಲ್ಲಿರುವ ಶ್ರೀಕಾಂತ್ ಅವರು ನಿಶಿಮೊಟೊ ಅವರಿಗೆ ಯಾವುದೇ ಹಂತದಲ್ಲೂ ಮೇಲುಗೈ ಸಾಧಿಸಲು ಅವಕಾಶ ನೀಡಲಿಲ್ಲ. ವರ್ಷವೊಂದರಲ್ಲಿ ನಾಲ್ಕು ಅಥವಾ ಅದಕ್ಕಿಂತ ಹೆಚ್ಚಿನ ಸೂಪರ್ ಸೀರೀಸ್ ಪ್ರಶಸ್ತಿ ಗೆದ್ದ ನಾಲ್ಕನೇ ಸಿಂಗಲ್ಸ್ ಆಟಗಾರರೆಂಬ ಹೆಗ್ಗಳಿಕೆಗೆ ಶ್ರೀಕಾಂತ್ ಪಾತ್ರರಾದರು. (ವರದಿ-ಎಂ.ಎನ್)

Leave a Reply

comments

Related Articles

error: