ಮೈಸೂರು

ಅ.31 ರಿಂದ ನ.4ರ ವರೆಗೆ ಸಹಸ್ರ ಚಂಡಿಕಾ ಮಹಾಯಾಗ

ಮೈಸೂರು, ಅ. 30 : ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದಿಂದ ಲೋಕ ಕಲ್ಯಾಣಾರ್ಥ ಸಹಸ್ರ ಚಂಡಿಕಾ ಮಹಾಯಾಗ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ತಿಳಿಸಿದರು.

ದೇವರಾಜ ಮೊಹಲ್ಲಾದ ಅಮೃತೇಶ್ವರ ದೇವಸ್ಥಾನದಲ್ಲಿ ಅ.31 ರಿಂದ ನ.4 ರವರೆಗೆ ಆಯೋಜಿಸಿರುವ ಧಾರ್ಮಿಕ ಕಾರ್ಯಕ್ರಮವನ್ನು 130 ಬ್ರಾಹ್ಮಣ, ಜೈನ ವಿದ್ವಾಂಸರ ಸಮ್ಮುಖದಲ್ಲಿ ಚಂಡಿಕಾ ಪಾರಾಯಣದೊಂದಿಗೆ ಆರಂಭಿಸಲಾಗುವುದು, ಕಳಸ ಸ್ಥಾಪನೆ, ಚಕ್ರಾರ್ಚನೆ, ವಾಂಚಾಕಲ್ಪ ಮಹಾಗಣಪತಿ ಹೋಮ, ಪೂರ್ಣಾಹುತಿ ಜತೆಗೆ ಭಜನಾ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವೇ.ಬ್ರ. ಮಹೇಂದ್ರ ಕುಮಾರ್ ಅವರು ಮಾತನಾಡಿ ನ.1ರಂದು ಚಂಡಿಕಾ ಪಾರಾಯಣ, ಪಂಚದುರ್ಗ ಹೋಮ, ನವಾವರಣ ಜಪ, ಅಷ್ಟಾವಧಾನ ಸೇವೆಯನ್ನು 125 ಬ್ರಾಹ್ಮಣರು ನೆರವೇರಿಸಲಿದ್ದು, ನ.2ರಂದು ಮೃತ್ಯುಂಜಯ ಹೋಮ, ಪೂರ್ಣಾಹುತಿ, ಪ್ರಸಾದ ವಿನಿಯೋಗ ನಡೆಯುವುದು. ಸಂಜೆ ದುರ್ಗಾ ದೀಪ ನಮಸ್ಕಾರಕ್ಕೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ ಎಂದರು.

ನ.3ರಂದು ಬಾಲತ್ರಿಪುರ ಸುಂದರಿ ಸಹಿತ ನವಾವರಣ ಹೋಮ, ಸಂಜೆ ಅಗ್ನಿ ಜನನ ಕುಂಡ, ಲಲಿತಾ ಸಹಸ್ರ ಪಾರಾಯಣ ನಡೆಯಲಿದ್ದು ವಿವಿಧ ವಿದ್ವಾಂಸರನ್ನು ಸನ್ಮಾನಿಸಲಾಗುವುದು, ನ.4ರಂದು 121 ವೈದಿಕರಿಂದ 11 ಕುಂಡಗಳಲ್ಲಿ ಸಹಸ್ರ ಚಂಡಿಕಾ ಮಹಾಯಾಗ, ಪೂರ್ಣಾಹುತಿ ನಡೆಸಲಾಗುವುದು, ಬಳಿಕ ಭಕ್ತರಿಗೆ ತೀರ್ಥ ಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ ಎಂದು ತಿಳಿಸಿದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: