ಮೈಸೂರು

ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಮೈಸೂರಿನ ಜಿ.ಎಲ್.ಎನ್ ಸಿಂಹ ಆಯ್ಕೆ

ಮೈಸೂರು,ಅ.31-

ಮೈಸೂರು,ಅ.31-ವೇದ ಸೂಕ್ತಗಳನ್ನು ಆಧರಿಸಿ, ಪೌರಾಣಿಕ ಕಥಾ ಪ್ರಸಂಗಗಳನ್ನು ಅನುಸರಿಸಿ, ಸ್ತೋತ್ರಗಳನ್ನು ಅನುಕರಿಸಿ ತಮ್ಮ ಕುಂಚದಲ್ಲಿ ಚಿತ್ರಗಳನ್ನು ರಚಿಸಿರುವ ಜಿ.ಎಲ್.ಎನ್.ಸಿಂಹ ಭಾರತೀಯ ಕಲಾಲೋಕಕ್ಕೆ ನೀಡಿರುವ ತಮ್ಮದೇ ಆದ ವಿಶಿಷ್ಟ ಕೊಡುಗೆಯನ್ನು ಗುರುತಿಸಿ ರಾಜ್ಯ ಸರ್ಕಾರ 2017ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಸಿಂಹ ಅವರನ್ನು ಆಯ್ಕೆ ಮಾಡಿದೆ.

ಭಾರತೀಯ ಕಲಾಲೋಕದಲ್ಲಿ ಅಲ್ಲೊಂದು ಇಲ್ಲೊಂದು ಇಂತಹ ಪ್ರಯತ್ನಗಳು ನಡೆದಿವೆಯಾದರೂ ಚಿರಸ್ಥಾಯಿಯಾಗಿ, ನೋಡುಗರನ್ನು ನಿಬ್ಬೆರಗಾಗಿಸುವಂತೆ ಮಾಡಿಲ್ಲ. ಈ ರೀತಿ ಸರಣಿ ಚಿತ್ರಗಳಿಗೆ ಜೀವ ತುಂಬುವಾಗ ಸಿಂಹ ಅವರು ಪ್ರತಿಯೊಂದು ಋಕ್ ಅಥವಾ ಶ್ಲೋಕದ ಆಂತರ್ಯಕ್ಕಿಳಿದು ಅದನ್ನು ಅರ್ಥ ಮಾಡಿಕೊಂಡು ಚಿತ್ರ ಬಿಡಿಸಿದ್ದಾರೆ. ಹೀಗಾಗಿ ಒಂದೊಂದು ಚಿತ್ರವೂ ಅನನ್ಯವಾಗಿದ್ದು, ಒಟ್ಟು ಕೃತಿಗಳು ಸರಣಿಯ ಆಂತರ್ಯವನ್ನು ಎತ್ತಿತೋರಿಸುವಲ್ಲಿ ಸಮರ್ಥವಾಗಿವೆ.

ಮೈಸೂರಿನವರಾದ ಸಿಂಹ ಅವರಿಗೆ ಕಲೆಯಲ್ಲೇ ಮನಸ್ಸಿದ್ದ ಕಾರಣ ಶ್ರೀ ಚಾಮರಾಜೇಂದ್ರ ಚಿತ್ರಕಲಾ ಶಾಲೆಗೆ ಸೇರಿ ಅಲ್ಲಿ ಎಂ.ಎಫ್.ಸೂಫಿ, ಎಸ್.ಎನ್.ಸ್ವಾಮಿ, ವೈ.ಸುಬ್ರಮಣ್ಯ ರಾಜು ಅವರಿಂದ ಕ್ರಮಬದ್ಧ ಶಿಕ್ಷಣ ಪಡೆದರು. 2001 ನೇ ಇಸವಿಯಲ್ಲಿ ರಾಮ್‍ಸನ್ಸ್ ಕಲಾ ಪ್ರತಿಷ್ಠಾನಕ್ಕಾಗಿ ಶ್ರೀ ಸೂಕ್ತ ಚಿತ್ರಗಳ ಸರಣಿಯನ್ನು ರಚಿಸಿದರು, ಅದರೊಟ್ಟಿಗೆ ಸಿಂಹರ ಕಲಾಸಾಧನೆ ಉನ್ನತ ಮಟ್ಟಕ್ಕೇರಿ, ಇದರ ಫಲವಾಗಿ ಪುರುಷ ಸೂಕ್ತ, ಅಂಭೃಣೀ ಸೂಕ್ತ, ರುದ್ರ ಸೂಕ್ತ, ಮಾಂತ್ರಿಕ ಜಗತ್ತಿನ ಸುಪ್ರಸಿದ್ಧವಾದ ದಶಮಾಹಾವಿದ್ಯೆ, ಕಾಳಿಕಾ ಪುರಾಣ, ದೇವೀ ಪುರಾಣ, ಹರಿವಂಶ, ಮಾರ್ಕಂಡೇಯ ಪುರಾಣ, ಗಣೇಶ ಪುರಾಣ, ಅಲ್ಲದೆ ಇನ್ನೂ ಅನೇಕ ಬಿಡಿ ಬಿಡಿ ಚಿತ್ರಗಳ ರಚನೆಗಳು ಸೇರಿ ಸುಮಾರು ನೂರಾರು ಚಿತ್ರಗಳ ರಚನೆಯಾದವು.  ಕಳೆದ 15 ವರ್ಷಗಳ ಕಲಾ ಸಾಧನೆಯಲ್ಲಿ ರಚಿತವಾಗಿರುವ ಎಲ್ಲ ಚಿತ್ರಗಳು ರಾಮ್‍ಸನ್ಸ್ ಕಲಾ ಪ್ರತಿಷ್ಠಾನದ ಸಂಗ್ರಹದಲ್ಲಿವೆ. (ವರದಿ-ಎಚ್.ಎನ್, ಎಂ.ಎನ್)

 

 

Leave a Reply

comments

Related Articles

error: