ಕರ್ನಾಟಕಪ್ರಮುಖ ಸುದ್ದಿ

ಪೊಲೀಸ್ ಇಲಾಖೆ ಮಾದರಿಯಲ್ಲಿ ಅರಣ್ಯ ಇಲಾಖೆಯಿಂದ ಪ್ರಶಸ್ತಿ : ಸಚಿವ ರಮಾನಾಥ ರೈ

ಬೆಂಗಳೂರು (ಅ.31): ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಯಲ್ಲಿ ಅತ್ಯುತ್ತಮ ಸೇವೆಗೈದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ನೌಕರರನ್ನು ಮುಂದಿನ ದಿನಗಳಲ್ಲಿ ಪೊಲೀಸ್ ಇಲಾಖೆಯ ಮಾದರಿಯಲ್ಲಿ ಪ್ರಶಸ್ತಿ ಪದಕ ನೀಡಿ ಸನ್ಮಾನಿಸುವ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಪರಿಸರ ವನ್ಯಜೀವಿ, ಅರಣ್ಯ ಸಚಿವ ಬಿ.ರಮಾನಾಥ ರೈ ತಿಳಿಸಿದ್ದಾರೆ.

ಬಿ.ಮಾರಪ್ಪ ಸ್ಮಾರಕ ಟ್ರಸ್ಟ್, ಬೆಂಗಳೂರು ಮತ್ತು ಅರಣ್ಯ ಇಲಾಖೆಯು ಸೋಮವಾರ ಮಲ್ಲೇಶ್ವರದ ಅರಣ್ಯಭವನದಲ್ಲಿ ವಿಶೇಷ ಸೇವೆ ಸಲ್ಲಿಸಿರುವ ಅರಣ್ಯ ನೌಕರರುಗಳಿಗೆ ಏರ್ಪಡಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭ -2017 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಶಸ್ತಿ ಪ್ರದಾನ ನೆರವೇರಿಸಿದ ನಂತರ ಮಾತನಾಡಿದ ಅವರು, ಅರಣ್ಯ ಉಳಿಸುವ ಬಗ್ಗೆ ಸಾರ್ವಜನಿಕರು ವರ್ತಮಾನದಲ್ಲಿ ಗಂಭೀರವಾಗಿ ಯೋಚಿಸುತ್ತಿದ್ದಾರೆ. ಅರಣ್ಯವಿಲ್ಲದೆ ಬದುಕು ಇಲ್ಲ ಎಂಬುದನ್ನು ಜನರು ಅರಿತಿದ್ದಾರೆ ಎಂದು ತಿಳಿಸಿದರು.

ಜನಸಂಖ್ಯೆ ಹೆಚ್ಚಿದಂತೆಲ್ಲಾ ಅರಣ್ಯದ ಮೇಲೆ ಒತ್ತಡ ಹೆಚ್ಚುತ್ತಿದೆ. ಅರಣ್ಯದ ಮೇಲೆ ಒತ್ತಡ ಬಾರದಿರುವ ಹಾಗೆ ಅರಣ್ಯದಂಚಿನ ಗ್ರಾಮಸ್ಥರಿಗೆ ಸೌರ ವಿದ್ಯುತ್, ಸೌರ ಒಲೆ, ವಾಟರ್ ಹೀಟರ್ ಅನಿಲ ಸಂಪರ್ಕಗಳನ್ನು ನೀಡಲಾಗುತ್ತಿದೆ ಎಂದರು. ನದಿಗಳ ಜಲ ಮೂಲ ಅರಣ್ಯಗಳೇ ಆಗಿವೆ. ಆದ್ದರಿಂದ ಅರಣ್ಯಗಳನ್ನು ಮತ್ತು ವನ್ಯಜೀವಿಗಳನ್ನು ಉಳಿಸಬೇಕು ಎಂದ ಅವರು ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣಾ ಕಾಯ್ದೆ ಬರುವುದಕ್ಕೂ ಮುಂಚೆ ಲಕ್ಷಾಂತರ ಹೆಕ್ಟೇರ್ ಅರಣ್ಯ ಪ್ರದೇಶ ಸಾರ್ವಜನಿಕರ ಇತರೆ ಕಾರ್ಯಗಳಿಗೆ ಬಳಕೆಯಾಗುತ್ತಿತ್ತು. ಆದರೆ ಕಾಯ್ದೆ ಬಂದ ನಂತರ ಅರಣ್ಯ ಪ್ರದೇಶದ ಒತ್ತುವರಿ ನಿಯಂತ್ರಣಗೊಂಡಿದೆ ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಗೃಹಸಚಿವ ರಾಮಲಿಂಗಾರೆಡ್ಡಿ ಅವರು ಮಾತನಾಡಿ ನಮ್ಮ ದೇಶಕ್ಕೆ ಸ್ವಾತಂತ್ರ್ಯಬಂದಾಗ ನಮ್ಮ ದೇಶದಲ್ಲಿ ಸಾಕಷ್ಟು ಅರಣ್ಯವಿತ್ತು. ಆದರೆ ಜನಸಂಖ್ಯೆ ಹೆಚ್ಚಿದಂತೆಲ್ಲಾ ಅರಣ್ಯ ಪ್ರದೇಶ ಕಡಿಮೆಯಾಗುತ್ತಿದೆ. ಹಿಂದೆ ಉರುವಲಿಗೆ ಕಾಡು ನಾಶವಾಗುತ್ತಿತ್ತು. ಆದರೆ ಈಗ ಹಳ್ಳಿಹಳ್ಳಿಗಳಲ್ಲಿ ಅನಿಲ ಬಳಕೆಯಾಗುತ್ತಿರುವ ಕಾರಣ ಕಾಡು ಕಡಿಯುವ ಪ್ರಕ್ರಿಯೆ ಕಳೆದ 20-30 ವರ್ಷಗಳಿಂದ ಕಡಿಮೆಯಾಗಿದೆ ಎಂದರು.

ಅರಣ್ಯ ಸಂರಕ್ಷಣೆಯ ಜೊತೆಗೆ ಪರಿಸರ ಕಾಳಜಿಯು ಸಾರ್ವಜನಿಕರಲ್ಲಿ ಹೆಚ್ಚಬೇಕು. ಸಿಒಪಿ ಗಣೇಶ, ಬಣ್ಣದ ಗಣೇಶ ಮೂರ್ತಿಗಳ ವಿಸರ್ಜನೆ ನಿಲ್ಲಬೇಕು. ದೀಪಾವಳಿ ಸಂದರ್ಭಲ್ಲಿ ಪಟಾಟಿಯಿಂದ ವಾಯು ಮಾಲಿನ್ಯ ಹೆಚ್ಚುತ್ತಿದ್ದು ಸಾಂಕೇತಿಕವಾಗಿ ಮಾತ್ರ ಪಟಾಕಿಯನ್ನು ಹೊಡೆಯಬೇಕು ಎಂದು ಹೇಳಿದರು.

ಸಮಾರಂಭದಲ್ಲಿ ಪ್ರಮುಖ ಅರಣ್ಯ ಸಂರಕ್ಷಣಾಧಿಕಾರಿ ಸುಗಾರ, ಅರಣ್ಯ ಪ್ರಮುಖ ಸಂರಂಕ್ಷಣಾಧಿಕಾರಿ ಪುನಟಿ ಶ್ರೀಧರ್, ಅಪರ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ, ಅಜೆಯ್ ಮಿಶ್ರಾ, ನಿವೃತ್ತ ಐ.ಎ.ಎಸ್. ಅಧಿಕಾರಿಗಳಾದ ಎಂ.ಬಿ. ಪ್ರಕಾಶ್, ಎ.ಎಸ್. ಸದಾಶಿವಯ್ಯ ಮ್ಯಾನೇಜಿಂಗ್ ಟ್ರಸ್ಟಿ ಎಂ. ಸಂಪಂಗಿ ಮತ್ತಿತರರು ಉಪಸ್ಥಿತರಿದ್ದರು.

(ಎನ್‍ಬಿಎನ್)

Leave a Reply

comments

Related Articles

error: