ಕರ್ನಾಟಕದೇಶಪ್ರಮುಖ ಸುದ್ದಿ

ನಟ ಉಪೇಂದ್ರರ ವಿರುದ್ದ ಬಿಜೆಪಿ ಕಾನೂನು ಹೋರಾಟ : ಶೋಭಾ ಕರಂದ್ಲಾಜೆ ಎಚ್ಚರಿಕೆ

ಬೆಂಗಳೂರು (ಅ.31): ನಟ ಉಪೇಂದ್ರ ಅವರ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಬಿಜೆಪಿ ನಾಯಕಿ ಹಾಗೂ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

“ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ರಾಜಕೀಯ ಪಕ್ಷ ಕಟ್ಟಲು ಅವಕಾಶ ಇದೆ. ಆದರೆ ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಅವಹೇಳನ ಮಾಡಿರುವುದನ್ನು ಸಹಿಸಲು ಸಾಧ್ಯವಿಲ್ಲ. ಈ ಬಗ್ಗೆ ಪಕ್ಷದ ವತಿಯಿಂದ ಕಾನೂನು ಹೋರಾಟ ನಡೆಸಲಾಗುವುದು” ಎಂದು ಶೋಭಾ ಎಚ್ಚರಿಕೆ ನೀಡಿದ್ದಾರೆ.

ಉಪೇಂದ್ರ ವಿರುದ್ಧ ವಾಗ್ದಾಳಿ ನಡೆಸಿರುವ ಶೋಭಾ ಅವರು, “ರಾಜಕೀಯ ಮಾಡಲು ಎಲ್ಲರಿಗೂ ಅವಕಾಶವಿದೆ. ಆದರೆ ಪ್ರಧಾನಿ ಮೋದಿ ಅವರನ್ನು ಟೀಕಿಸುವ ಮೂಲಕ ಉಪೇಂದ್ರ ಅವರು ಮೊದಲ ದಿನವೇ ಎಡವಿದ್ದಾರೆ. ನಟ ಉಪೇಂದ್ರ ಅವರು ಸಿನಿಮಾ ರಂಗದಲ್ಲಿ ಯಶಸ್ವಿಯಾಗಿರಬಹುದು. ಆದರೆ ರಾಜಕೀಯ ರಂಗದಲ್ಲಿ ಅವರು ಯಶಸ್ವಿಯಾಗಲು ಸಾಧ್ಯವಿಲ್ಲ ಎಂದು ಟೀಕಿಸಿದ್ದಾರೆ.

ವಿವಾದಕ್ಕೆ ಕಾರಣ ಏನು?

ಉಪೇಂದ್ರ ಅವರು ಚಿತ್ರದ ಹಾಡು ಬಳಸಿ ಮೋದಿ ಬಗ್ಗೆ ಸಿದ್ಧಪಡಿಸಿರುವ ವಿಡಿಯೋ ವೈರಲ್ ಆಗಿದೆ. ಪ್ರಧಾನಿ ಮೋದಿ ಅವರನ್ನು ಟೀಕಿಸುವ ಭರದಲ್ಲಿ ಅವರ ಅವರ ಬಗ್ಗೆ ಅಣಕವಾಡಲಾಗಿದೆ ಎಂಬುದು ಬಿಜೆಪಿ ಆರೋಪ.  ಇನ್ನು ಮೋದಿ ಭಾಷಣದ ಮದ್ಯೆ ಉಪೇಂದ್ರ ಅವರು ನಟಿಸಿದ ಚಿತ್ರವೊಂದರ ಬರಿವೋಳು’ ಅನ್ನೋ ಹಾಡನ್ನು ಹಾಕಿ ಸಂಯೋಜನೆ ಮಾಡಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ಬಿಜೆಪಿಯ ಕಣ್ಣನ್ನು ಕೆಂಪಗಾಗಿಸಿದೆ.

ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮುಂದಿನ ದಿನಗಳಲ್ಲಿ ಉಪ್ಪಿ ವಿರುದ್ಧ ಹೋರಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಬಿಜೆಪಿ ಯಾವ ರೀತಿಯ ಕಾನುನು ಕ್ರಮ ತೆಗೆದುಕೊಳ್ಳುತ್ತದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ.

ಇಂದು ಬೆಳಗ್ಗೆಯಷ್ಟೇ ಉಪೇಂದ್ರ ಅವರು ಅಧಿಕೃತವಾಗಿ ರಾಜಕೀಯ ರಂಗ ಪ್ರವೇಶ ಮಾಡಿದ್ದು, ತಮ್ಮದೇ ಆದ “ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ” ಎಂಬ ಹೊಸ ರಾಜಕೀಯ ಪಕ್ಷವನ್ನು ಆರಂಭಿಸಿದ್ದಾರೆ.

(ಎನ್‍ಬಿಎನ್‍)

Leave a Reply

comments

Related Articles

error: