ಮೈಸೂರು

ಚಾಮುಂಡಿಬೆಟ್ಟದ ನಂದಿಗೆ 12ನೇ ವರ್ಷದ ಮಹಾಭಿಷೇಕ

ಮೈಸೂರು, ನ. 2  ಬೆಟ್ಟದ ಬಳಗ ಚಾರಿಟಬಲ್ ಟ್ರಸ್ಟ್ ನಿಂದ ಇದೇ ನ.5ರಂದು ಚಾಮುಂಡಿ ಬೆಟ್ಟದ ನಂದಿಗೆ 12ನೇ ವರ್ಷದ ಮಹಾಭಿಷೇಕವನ್ನು ಆಯೋಜಿಸಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ಗೋವಿಂದ ತಿಳಿಸಿದರು.

ಅಂದು ಬೆಳಗ್ಗೆ 9.30ರಿಂದ ನಂದಿ ಆವರಣದಲ್ಲಿ ಆರಂಭವಾಗುವ ಮಹಾಭಿಷೇಕದಲ್ಲಿ ಸುತ್ತೂರು ಕ್ಷೇತ್ರದ ಶ್ರೀ ಶಿವರಾತ್ರಿದೇಶಿ ಕೇಂದ್ರ ಸ್ವಾಮೀಜಿ, ಗಣಪತಿ ಸಚ್ಚಿದಾನಂದ ಆಶ್ರಮದ ಶ್ರೀಗಣಪತಿ ಸಚ್ಚಿದಾನಂದ ಸ್ವಾಮೀಜಿ, ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ, ಹೊಸಮಠದ ಶ್ರೀಚಿದಾನಂದ ಸ್ವಾಮೀಜಿ, ಆದಿಚುಂಚನಗಿರಿ ಮಠದ ಮೈಸೂರು ಶಾಖೆಯ ಶ್ರೀಸೋಮನಾಥನಂದ ಸ್ವಾಮೀಜಿ, ಚಾಮುಂಡಿ ಬೆಟ್ಟದ ವ್ಯಾಘ್ರ ಮುಖರುದ್ರಪಾದ ಗುಹೆಯ ಶ್ರೀಜಮನಗಿರಿ ಸ್ವಾಮೀಜಿ ಸಾನಿಧ್ಯ ವಹಿಸುವರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

32 ರೀತಿಯ ಮಂಗಳ ದ್ರವ್ಯಗಳೊಂದಿಗೆ ನಡೆಸುವ ಉಪಚಾರ ಅಭಿಷೇಕ ನಡೆಯುವುದು, ನಂತರ ಮಹಾಭಿಷೇಕ, ಹೂವಿನ ಅಲಂಕಾರ ನಡೆಸಲಾಗುವುದು, ಇತಿಹಾಸದಲ್ಲಿ ಇದೇ ಮೊದಲಬಾರಿಗೆ ನಂದಿಗೆ ವಸ್ತ್ರ ಧರಿಸಲಾಗುವುದು, ಇದಕ್ಕಾಗಿ ಸುಮಾರು 54 ಮೀಟರ್ ಕಡು ನೀಲಿ ಬಣ್ಣದ  ವೆಲ್ವೇಟ್ ಬಟ್ಟೆಗೆ ಎಂಬ್ರಾಯಿಡರ್ ಸೇರಿದಂತೆ ಕಡು ಕೆಂಪು ಬಣ್ಣದ ಅಂಚು ಸೇರಿದ ಅತ್ಯಾಕರ್ಷಣೆಯ ವಸ್ತ್ರವನ್ನು ಹೊದಿಸಲಾಗುವುದು, ಇದಕ್ಕಾಗಿ ಸುಮಾರು 25 ಸಾವಿರ ರೂಗಳು ವೆಚ್ಚವಾಗಿದೆ, ಅಲ್ಲದೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಜನಪದವಾದ್ಯ ನಡೆಯುವುದು ಇದೇ ಸಂದರ್ಭದಲ್ಲಿ ಪ್ರಸಾದ ವಿನಿಯೋಗವನ್ನು ಆಯೋಜಿಸಿದೆ ಎಂದರು.

ನ.6ರಂದು ಸಂಜೆ 6.30 ಗಂಟೆಗೆ ಜೆ.ಎಸ್.ಎಸ್. ಆಸ್ಪತ್ರೆ ವತಿಯಿಂದ ಕಾರ್ತಿಕ ದೀಪೋತ್ಸವ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಕೋರಿದರು.

ಗೋಷ್ಠಿಯಲ್ಲಿ ಟ್ರಸ್ಟ್ ಕಾರ್ಯದರ್ಶಿ ಪ್ರಕಾಶ್, ಖಜಾಂಚಿ ಸುಂದರ್, ಪದಾಧಿಕಾರಿಗಳಾದ ಬ್ಯಾಂಕ್ ಶಿವಕುಮಾರ್, ನಾರಾಯಣ ಮೊದಲಾದವರು ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: