ಪ್ರಮುಖ ಸುದ್ದಿಮೈಸೂರು

ಪ್ರಧಾನಿ ಮೋದಿ ಕಾರ್ಯ ಶ್ಲಾಘನೀಯ: ಪ್ರತಾಪ್ ಸಿಂಹ

ಪ್ರಧಾನಿ ನರೇಂದ್ರ ಮೋದಿ ಅವರು 500 ಮತ್ತು 1000 ರು. ನೋಟನ್ನು ರದ್ದು ಮಾಡಿರೋದರಿಂದ ಕಪ್ಪುಹಣ ಮತ್ತು ನಕಲಿ ನೋಟ್ ಚಲಾವಣೆ, ಹವಾಲ ಮತ್ತು ರಿಯಲ್‍ ಎಸ್ಟೇಟ್‍ ದಂಧೆಗೆ ಬ್ರೇಕ್ ಬೀಳಲಿದೆ ಎಂದು ಸಂಸದ ಪ್ರತಾಪ್ ಸಿಂಹ ಅಭಿಪ್ರಾಯಪಟ್ಟರು.

ಬುಧವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಪ್ರಧಾನಿ ಮೋದಿ ಅವರು ತೆಗೆದುಕೊಂಡಿರುವ ಐತಿಹಾಸಿಕ ನಿರ್ಧಾರದಿಂದ ದೇಶದ ಆರ್ಥಿಕ ವ್ಯವಸ್ಥೆಗೆ ತೊಡಕುಂಟು ಮಾಡುತ್ತಿದ್ದ ಕಪ್ಪುಹಣ, ನಕಲಿ ನೋಟ್‍ ಚಲಾವಣೆಗೆ ಕಡಿವಾಣ ಬಿದ್ದಂತಾಗಿದೆ. ವರದಿಯ ಪ್ರಕಾರ ಇಂದು ದೇಶದಲ್ಲಿ 17,50,000 ಕೋಟಿ ರು. ಚಲಾವಣೆಯಲ್ಲಿದ್ದು ಇದರಲ್ಲಿ ಶೇ.45ರಷ್ಟು 500 ಮತ್ತು ಶೇ.39ರಷ್ಟು 1000 ರು. ನೋಟುಗಳೇ ಇವೆ. ಚಲಾವಣೆಯಲ್ಲಿರುವ ನೋಟುಗಳಲ್ಲಿ ಶೇ.84ರಷ್ಟು 500 ಮತ್ತು 1000 ರು. ನೋಟುಗಳೇ ಇವೆ. ಇವುಗಳ ನಿಷೇಧದಿಂದ ಕಪ್ಪುಹಣ, ನಕಲಿ ನೋಟುಗಳ ಹಾವಳಿಯನ್ನು ತಡೆಯಬಹುದು. ಈ ನಿರ್ಧಾರದಿಂದ ಬ್ಯಾಂಕಿಂಗ್ ವಲಯಕ್ಕೆ ಲಾಭ ತರಲಿದೆ ಎಂದರು.

ಟಿಪ್ಪು ಜಯಂತಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಿ, “ಮೈಸೂರು ಪ್ರಾಂತ್ಯಕ್ಕೆ ಸೇರಿದ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮೈಸೂರಿನ ಇತಿಹಾಸದ ಬಗ್ಗೆ ಅರಿವಿಲ್ಲ. ಟಿಪ್ಪು ಕನ್ನಡಿಗರ ಮೇಲೆ ನಡೆಸಿರುವ ದೌರ್ಜನ್ಯವು ತಿಳಿದಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಟಿಪ್ಪುವಿನ ಜಯಂತಿ ನಡೆಸಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಇದನ್ನು ವಿರೋಧಿಸಿ ಗುರುವಾರದಂದು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸುತ್ತೇವೆ ಎಂದು ತಿಳಿಸಿದರು.

Leave a Reply

comments

Related Articles

error: