ಕರ್ನಾಟಕಪ್ರಮುಖ ಸುದ್ದಿ

ಬಿಜೆಪಿ ಪರಿವರ್ತನಾ ಯಾತ್ರೆಗೆ ಅಮಿತ್ ಷಾ ಚಾಲನೆ : ಚುನಾವಣೆಗೆ ಭರ್ಜರಿ ಸಿದ್ಧತೆ

ಬೆಂಗಳೂರು (ನ.2): ಮುಂದಿನ ವರ್ಷಾರಂಭದಲ್ಲೇ ಎದುರಾಗಲಿರುವ ರಾಜ್ಯ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬೆಂಗಳೂರಿನಿಂದ ರಾಜ್ಯಾದ್ಯಂತ ಸಂಚರಿಸಲಿರುವ ಬಿಜೆಪಿ ಪರಿವರ್ತನಾ ಯಾತ್ರೆಗೆ ಇಂದು ರಾಷ್ಟ್ರೀಯ ಅಧ್ಯಕ್ಷ ಅಮಿತ್‍ ಷಾ ಚಾಲನೆ ನೀಡಿದರು.

ಸ್ವಂತ ಬಲದೊಂದಿಗೆ ಅಧಿಕಾರ ಹಿಡಿಯುವ ಉದ್ದೇಶದಿಂದ ನವಕರ್ನಾಟಕ ಪರಿವರ್ತನಾ ಯಾತ್ರೆ ಆರಂಭಿಸಿರುವ ಬಿಜೆಪಿ, ರಾಜ್ಯದಲ್ಲಿ ಚುನಾವಣೆ ಘೋಷಣೆಯಾಗುವ ವಿರೋಧಿಗಳ ವಿರುದ್ಧ ದೊಡ್ಡ ಮಟ್ಟದಲ್ಲಿ ರಣಕಹಳೆ ಮೊಳಗಿಸಿದೆ.

ಇಂದು ಬೆಂಗಳೂರು ಹೊರವಲಯದಲ್ಲಿರುವ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಯಾತ್ರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಉಸ್ತುವಾರಿ ಮುರಳೀಧರರಾವ್, ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್, ಸಹ ಉಸ್ತುವಾರಿ ಪಿಯೂಷ್‍ಗೋಯಲ್, ಕೇಂದ್ರ ಸಚಿವರಾದ ಅನಂತ್‍ಕುಮಾರ್, ಸದಾನಂದಗೌಡ, ರಮೇಶ್ ಜಿಗಜಿಣಗಿ, ಅನಂತ್‍ಕುಮಾರ್ ಹೆಗಡೆ, ಮುಖಂಡರಾದ ಜಗದೀಶ್ ಶೆಟ್ಟರ್, ಆರ್.ಅಶೋಕ್, ಕೆ.ಎಸ್.ಈಶ್ವರಪ್ಪ, ಪ್ರಹ್ಲಾದ್‍ಜೋಷಿ ಸೇರಿದಂತೆ ಅಪಾರ ಸಂಖ್ಯೆಯ ಕಾರ್ಯಕರ್ತರ ಸಮ್ಮುಖದಲ್ಲಿ ಜಾಲನೆ ದೊರೆಯಿತು.

ಇಂದು ಚಾಲನೆ ಪಡೆದಿರುವ ಈ ಯಾತ್ರೆಯು 224 ವಿಧಾನಸಭಾ ಕ್ಷೇತ್ರಗಳಲ್ಲಿ ಜ.25ರ ವರೆಗೆ 75 ದಿನ ತಿರುಗಾಡಲಿದ್ದು ಸುಮಾರು 7500 ಕಿ.ಮೀ. ಸಂಚಾರ ನಡೆಸಲಿದೆ. ಜ.28 ರಂದು ಬೆಂಗಳೂರಿನಲ್ಲಿ ಸಮಾರೋಪ ಸಮಾರಂಭದೊಂದಿಗೆ ಯಾತ್ರೆ ಸಮಾಪ್ತಿಗೊಳ್ಳಲಿದೆ. ಪ್ರತಿ ದಿನ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ರಾಜ್ಯ ಸರ್ಕಾರದ ಭ್ರಷ್ಟಾಚಾರ, ಕಾನೂನು ಸುವ್ಯವಸ್ಥೆ, ಸಚಿವ ಕೆ.ಜೆ.ಜಾರ್ಜ್ ವಿರುದ್ಧ ಸಿಬಿಐ ಎಫ್‍ಐಆರ್ ದಾಖಲಿಸಿರುವುದು ಹಾಗೂ ಕೇಂದ್ರ ಸರ್ಕಾರದ ಸಾಧನೆಗಳನ್ನು ಮತದಾರನಿಗೆ ತಲುಪಿಸುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಎನ್ನಲಾಗಿದೆ.

ದೊಡ್ಡ ಮಟ್ಟದ ಯಾತ್ರೆಗೆ ಚಾಲನೆ ನೀಡುವ ಮೂಲಕ 2018ರ ವಿಧಾನಸಭೆ ಚುನಾವಣೆಗೆ ಕಮಲ ಪಡೆ ನಾಯಕರು ಇಂದಿನಿಂದಲೇ ಚುನಾವಣಾ ಅಖಾಡವನ್ನು ಸಜ್ಜುಗೊಳಿಸಿದ್ದಾರೆ. ಈ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ನೇರ ಸವಾಲು ಹಾಕಿದ್ದಾರೆ. ಇಂದಿನ ರಥಯಾತ್ರೆಗೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ ಸೇರಿದಂತೆ 15 ಜಿಲ್ಲೆಗಳ ಪ್ರತಿ ಬೂತ್‍ನಿಂದ ಮೂವರು ಕಾರ್ಯಕರ್ತರನ್ನು ಆಹ್ವಾನಿಸಲಾಗಿದೆ.

ಬೆಂಗಳೂರಿನಿಂದ ಹೊರಟಿರುವ ಈ ರಥಯಾತ್ರೆಯು ಕುಣಿಗಲ್, ಅರಸೀಕೆರೆ, ಹಾಸನ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೆಳಗಾವಿ ಸೇರಿದಂತೆ ಮತ್ತಿತರ ಕಡೆ ಸಂಚರಿಸಿ ಡಿ.21ರಂದು ಹುಬ್ಬಳ್ಳಿಯಲ್ಲಿ ಸಮಾವೇಶಗೊಳ್ಳಲಿದೆ. ನಂತರ ಅಲ್ಲಿಂದ ಹೊರಡುವ ರಥಯಾತ್ರೆ ಇತರೆ ಭಾಗಗಳಲ್ಲಿ ಸಂಚರಿಸಿ ಮೈಸೂರು ತಲುಪಲಿದೆ. ಜ.28ರಂದು ಬೆಂಗಳೂರಿನಲ್ಲಿ ಬೃಹತ್ ಸಾರ್ವಜನಿಕ ಸಮಾರಂಭ ನಡೆಸುವ ಮೂಲಕ ನವ ಕರ್ನಾಟಕ ಪರಿವರ್ತನಾ ಯಾತ್ರೆಗೆ ತೆರೆ ಬೀಳಲಿದೆ ಈ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ.

ರಥಯಾತ್ರೆ ಸಂದರ್ಭದಲ್ಲಿ ಬಿಜೆಪಿ ಆಡಳಿತ ಇರುವ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸಚಿವರು ಭಾಗವಹಿಸಲಿದ್ದಾರೆ. ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜಸ್ಥಾನ ಮುಖ್ಯಮಂತ್ರಿ ವಸುಂದರರಾಜೆ, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‍ಸಿಂಗ್ ಚೌವ್ಹಾಣ್, ಬಿಹಾರ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ, ಕೇಂದ್ರ ಸಚಿವರಾದ ರಾಜನಾಥ್‍ಸಿಂಗ್, ಅರುಣ್‍ಜೇಟ್ಲಿ, ನಿತಿನ್ ಗಡ್ಕರಿ, ಉಮಾಭಾರತಿ ಸೇರಿದಂತೆ ಮತ್ತಿತರ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

(ಎನ್‍ಬಿಎನ್‍)

Leave a Reply

comments

Related Articles

error: