
ಮೈಸೂರು (ನ.2): ಎರಡು ಬಾರಿ ದೇಶದಲ್ಲೇ ಸ್ವಚ್ಛ ನಗರ ಎಂಬ ಕೀರ್ತಿಗೆ ಪಾತ್ರವಾಗಿರುವ ಮೈಸೂರು ಮಹಾನಗರ ಪಾಲಿಕೆ ಕಿರೀಟಕ್ಕೆ ಇದೀಗ ಕೇಂದ್ರ ಸರ್ಕಾರ ಮತ್ತೊಂದು ಗರಿ ಸೇರಿಸಿದೆ.
ದೇಶದಲ್ಲೇ ಮೊದಲ ಬಾರಿಗೆ ಪ್ರಾರಂಭಿಸಿದ ಸಾರ್ವಜನಿಕ ಬೈಸಿಕಲ್ ಸೇವೆ ‘ಟ್ರಿಣ್ ಟ್ರಿಣ್’ಗೆ ಯೋಜನೆಗೆ ಕೇಂದ್ರ ಸರ್ಕಾರದ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯವು ಶಹಬ್ಬಾಸ್ಗಿರಿ ನೀಡಿದ್ದು, ದೇಶದಲ್ಲೇ ಅತ್ಯುತ್ತಮ ‘ಪಬ್ಲಿಕ್ ಬೈಸಿಕಲ್ ಶೇರಿಂಗ್’ ವ್ಯವಸ್ಥೆ ಎಂಬ ಪ್ರಶಸ್ತಿ ನೀಡಿದೆ.
ಮೈಸೂರಿನ ಪಿಬಿಎಸ್ ಅತ್ಯುತ್ತಮ ಎನ್ಎಂಟಿ ಯೋಜನೆ ಎಂದು ಮನ್ನಣೆ ಗಳಿಸಿದೆ. ತೆಲಂಗಾಣದ ಹೈದರಾಬಾದ್ ನಲ್ಲಿನ ಅಂತಾರಾಷ್ಟ್ರೀಯ ಸಮಾವೇಶ ಸಭಾಂಗಣದಲ್ಲಿ ನ.6ರಂದು ನಡೆಯಲಿರುವ 10ನೇ ‘ಭಾರತದಲ್ಲಿ ನಗರ ಚಲನಶೀಲತೆ’ ಸಮಾವೇಶ ಮತ್ತು ವಸ್ತು ಪ್ರದರ್ಶನ ಸಮಾರೋಪ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಎಂಆರ್ ಟಿಎಸ್ ಉಪ ಕಾರ್ಯದರ್ಶಿ ವಿ.ಎಸ್.ಪಾಂಡೆ ತಿಳಿಸಿದ್ದಾರೆ.
ಕೇಂದ್ರದ ನಗರ ರಸ್ತೆ ಸಾರಿಗೆ ಇಲಾಖೆ ಪರಿಸರ ಸ್ನೇಹಿ ಯೋಜನೆಯನ್ನು ಮೈಸೂರಿನಲ್ಲಿ ಮೊದಲ ಬಾರಿಗೆ ಆರಂಭಿಸಲು ಉತ್ಸಾಹ ತೋರಿದ್ದರಿಂದ ಮೈಸೂರು ಜಿಲ್ಲಾಡಳಿತ ಮತ್ತು ಪಾಲಿಕೆ ಜಂಟಿಯಾಗಿ ಟ್ರಿಣ್ ಟ್ರಿಣ್ ಯೋಜನೆ ರೂಪಿಸಿ ನಗರ ವ್ಯಾಪ್ತಿಯಲ್ಲಿ ಯಶಸ್ವಿಯಾಗಿ ಜಾರಿಗೊಳಿಸಿವೆ. ಮೈಸೂರು ಅರಮನೆ, ಮೃಗಾಲಯ, ಚಾಮುಂಡಿ ಬೆಟ್ಟ ಮತ್ತು ತಪ್ಪಲು, ರೈಲ್ವೆ ನಿಲ್ದಾಣ, ನಗರ ಮತ್ತು ಗ್ರಾಮಾಂತರ ಬಸ್ ನಿಲ್ದಾಣ, ರಾಮಸ್ವಾಮಿ ವೃತ್ತ, ಆರ್ಟಿಓ ವೃತ್ತ, ಒಂಟಿಕೊಪ್ಪಲ್ ಆಕಾಶವಾಣಿ, ಸರಸ್ವತಿಪುರಂ ಅಗ್ನಿಶಾಮಕ ದಳ, ಬಲ್ಲಾಳ್ ವೃತ್ತ, ಮಿನಿ ವಿಧಾನಸೌಧ, ನಜರಬಾದ್ ಸೇರಿದಂತೆ ನಗರದ ಒಟ್ಟು 52 ಡಾಕಿಂಗ್ ಸೆಂಟರ್ಗಳು ಸಾರ್ವಜನಿಕರ ಬಳಕೆಯಲ್ಲಿವೆ.
(ಎನ್ಬಿಎನ್)