ಕರ್ನಾಟಕಪ್ರಮುಖ ಸುದ್ದಿ

ಕೆಪಿಎಂಇ ಕಾಯ್ದೆ ತಿದ್ದುಪಡಿ ವಿರೋಧಿಸಿ ಖಾಸಗಿ ಆಸ್ಪತ್ರೆ ವೈದ್ಯರ ಮುಷ್ಕರ : ರೋಗಿಗಳಿಗೆ ತಟ್ಟಿದೆ ಮುಷ್ಕರದ ಬಿಸಿ

ರಾಜ್ಯ(ಬೆಂಗಳೂರು)ನ.3:-  ರಾಜ್ಯದಾದ್ಯಂತ  ಖಾಸಗಿ ಆಸ್ಪತ್ರೆಗಳ ವೈದ್ಯರು ಸೇವೆ ಸ್ಥಗಿತಗೊಳಿಸಿ ಮುಷ್ಕರ ನಡೆಸುತ್ತಿದ್ದು, ರಾಜ್ಯ ರಾಜಧಾನಿಯಲ್ಲಿಯೂ ರೋಗಿಗಳಿಗೆ ಮುಷ್ಕರದ ಬಿಸಿ ತಟ್ಟಿದೆ.

ಮಂಡ್ಯ: ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ಖಾಸಗಿ ಆಸ್ಪತ್ರೆಗಳ ವೈದ್ಯರು ಮೌನ ಪ್ರತಿಭಟನೆ ನಡೆಸಿದ್ದಾರೆ. ಆಸ್ಪತ್ರೆಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದು, ಸರ್ಕಾರ ಜಾರಿಗೆ ತರಲು ಹೊರಟಿರುವ ನೀತಿಯಿಂದ ಖಾಸಗಿ ಆಸ್ಪತ್ರೆ ಮತ್ತು ಆಸ್ಪತ್ರೆಗೆ ಬರುವ ರೋಗಿಗಳಿಗೆ ತೊಂದರೆಯಾಗಲಿದೆ. ಇದರಿಂದ ಆಸ್ಪತ್ರೆ ನಡೆಸುವುದು ಕಷ್ಟವಾಗುತ್ತೆ. ನಂತರದ ಪರಿಣಾಮಗಳಿಗೆ ಸರ್ಕಾರವೇ ನೇರ ಹೊಣೆಯಾಗುತ್ತೆ ಎಂದು ಆರೋಪಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಚಿತ್ರದುರ್ಗ: ಖಾಸಗಿ ವೈದ್ಯರ ಮುಷ್ಕರ ಹಿನ್ನೆಲೆಯಲ್ಲಿ  ಚಿತ್ರದುರ್ಗದಲ್ಲಿ ಬಹುತೇಕ ಖಾಸಗಿ ಆಸ್ಪತ್ರೆಗಳು ಖಾಲಿ ಖಾಲಿ ಹೊಡೆಯುತ್ತಿವೆ. ಆಸ್ಪತ್ರೆಗಳು ವೈದ್ಯರು, ರೋಗಿಗಳಿಲ್ಲದೆ ಬಣಗುಡುತ್ತಿವೆ. ವೈದ್ಯರ ಮುಷ್ಕರದಿಂದ ರೋಗಿಗಳು ಪರದಾಡುತ್ತಿದ್ದಾರೆ.

ಗದಗ : ಕೆಪಿಎಂಇ ಕಾಯ್ದೆ ತಿದ್ದುಪಡಿ ವಿರೋಧಿಸಿ ಖಾಸಗಿ ಆಸ್ಪತ್ರೆ ವೈದ್ಯರ ಮುಷ್ಕರ ಹಿನ್ನೆಲೆಯಲ್ಲಿ  ಗದಗ ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳು ಬಂದ್ ನಡೆಸಿವೆ. ಸಾರ್ವಜನಿಕರಿಗೆ ಮುಷ್ಕರ ಬಿಸಿ ತಟ್ಟಿದೆ. ಮುಷ್ಕರದ ಮಾಹಿತಿ ಇಲ್ಲದೆ ಆಸ್ಪತ್ರೆಗೆ ಚಿಕಿತ್ಸೆಗೆ ಬಂದು ಜನರು ಪರದಾಡುತ್ತಿದ್ದಾರೆ. ಆಸ್ಪತ್ರೆ ಬಂದ್ ಹಿನ್ನೆಲೆಯಲ್ಲಿ ಜನರು ಚಿಕಿತ್ಸೆ ಇಲ್ಲದೇ ಹಿಂದಿರುಗುತ್ತಿದ್ದಾರೆ. ಗದಗ ನಗರದ  ಮಹಾತ್ಮಾಗಾಂಧಿ, ರೇಣುಕಾ, ಹುಯಿಲಗೋಳ ಸೇರಿದಂತೆ ಅನೇಕ ಆಸ್ಪತ್ರೆಗಳು ಬಂದ್ ನಡೆಸಿವೆ. ಗದಗ ಜಿಲ್ಲೆಯ ಶಿರಹಟ್ಟಿ, ಮುಂಡರಗಿ, ರೋಣ, ನರಗುಂದ ತಾಲೂಕುಗಳಲ್ಲೂ ಮುಷ್ಕರದ ಬಿಸಿ ತಟ್ಟಿದೆ.

ರಾಮನಗರ: ಖಾಸಗಿ ಆಸ್ಪತ್ರೆ ವೈದ್ಯರ ಮುಷ್ಕರ ಹಿನ್ನೆಲೆ ರಾಮನಗರ  ಜಿಲ್ಲೆಯಾದ್ಯಂತ ಖಾಸಗಿ ಆಸ್ಪತ್ರೆಗಳು ಬಂದ್ ನಡೆಸಿವೆ. ಪ್ರತಿಷ್ಠಿತ ಆಸ್ಪತ್ರೆಗಳಿಗೆ ಮುಷ್ಕರದ ಬಿಸಿ ತಟ್ಟಿದ್ದು,  ಮುಷ್ಕರದ ಮಾಹಿತಿ ಇಲ್ಲದೆ ರೋಗಿಗಳು ಚಿಕಿತ್ಸೆ ಗೆ ಆಗಮಿಸುತ್ತಿದ್ದಾರೆ. ಅಂಟಿಸಿದ ಫಲಕ ನೋಡಿ ಹಿಂತಿರುಗುತ್ತಿದ್ದಾರೆ. ರಾಮನಗರ ಜಿಲ್ಲೆಯ ಮಾಗಡಿ, ಕನಕಪುರ, ಚನ್ನಪಟ್ಟಣ ಹಾಗೂ ರಾಮನಗರದ ಒಟ್ಟು 50ಕ್ಕೂ ಖಾಸಗಿ ನರ್ಸಿಂಗ್ ಹೋಂಗಳು ಹಾಗೂ ಹಲವು ಕ್ಲಿನಿಕ್ ಗಳು ಬಂದ್ ನಡೆಸಿವೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳ ಚಿಕಿತ್ಸೆಗೆ ತೊಂದರೆ ಇಲ್ಲವಾಗಿದೆ. ಸರ್ಕಾರಿ ಆಸ್ಪತ್ರೆ ವೈದ್ಯರು ರಜೆಯ ಮೇಲೆ ತೆರಳದಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.

 ಬಾಗಲಕೋಟ; ಹೆರಿಗೆಗಾಗಿ ಬಂದ ಮಹಿಳೆಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯದೆ 108 ವಾಹನದಲ್ಲಿ ಆಸ್ಪತ್ರೆ ಯಿಂದ ಆಸ್ಪತ್ರೆಗೆ ಓಡಾಟ ನಡೆದಿದ್ದು ,ಕುಟುಂಬಸ್ಥರಲ್ಲಿ ಆತಂಕ ಮನೆ ಮಾಡಿದ ಘಟನೆ ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಇಲಕಲ್ ಪಟ್ಟಣದಲ್ಲಿ ನಡೆದಿದೆ. ಕೊಡಗಲಿ ತಾಂಡಾದ ಚೈತ್ರಾ ಚಿಕಿತ್ಸೆ ಸಿಗದೇ ಪರದಾಡುತ್ತಿದ್ದಾರೆ.  ಮೊದಲ,ಎರಡನೇ ಹೆರಿಗೆಯಲ್ಲಿ ಮಗು ಸಾವು.ಮೂರನೇ ಹೆರಿಗೆಗಾಗಿ ಆಸ್ಪತ್ರೆಗೆ ಬಂದ ಮಹಿಳೆ ಕಠಿಣ ಪರಿಸ್ಥಿತಿ ಎದುರಿಸುತ್ತಿದ್ದಾಳೆ. ಇಂದು ಖಾಸಗಿ  ವೈದ್ಯರ ಮುಷ್ಕರ ಹಿನ್ನಲೆ ಚಿಕಿತ್ಸೆ ನೀಡಲು ವೈದ್ಯರು ನಿರಾಕರಿಸಿದ್ದಾರೆ. ಚಿಕಿತ್ಸೆ ನೀಡದ ವೈದ್ಯರ ಮೇಲೆ ಕುಟುಂಬಸ್ಥರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಚಾಮರಾಜನಗರ :  ಕೆಪಿಎಂಇ ಕಾಯ್ದೆ ತಿದ್ದುಪಡಿ ವಿರೋಧಿಸಿ ಖಾಸಗಿ ಆಸ್ಪತ್ರೆ ವೈದ್ಯರ ಮುಷ್ಕರ ಹಿನ್ನೆಲೆ ಗಡಿಜಿಲ್ಲೆ ಚಾಮರಾಜನಗರದಲ್ಲೂ ಖಾಸಗಿ ಆಸ್ಪತ್ರೆಗಳು ಬಂದ್ ನಡೆಸಿವೆ. ಜಿಲ್ಲೆಯಾದ್ಯಂತ 20 ಖಾಸಗಿ ಆಸ್ಪತ್ರೆಗಳು ಸೇರಿದಂತೆ ಒಟ್ಟು 161 ಖಾಸಗಿ ಕ್ಲಿನಿಕ್ ಗಳು ಬಂದ್ ನಡೆಸಿದ್ದು ಸಾರ್ವಜನಿಕರಿಗೆ ಮುಷ್ಕರದ ಬಿಸಿ ತಟ್ಟಿದೆ. ಆಸ್ಪತ್ರೆಗೆ ಚಿಕಿತ್ಸೆಗೆ ಬಂದು ಮುಷ್ಕರದ ಮಾಹಿತಿ ಇಲ್ಲದೆ ಜನರು  ಪರದಾಟ ನಡೆಸಿದರು. ಚಾಮರಾಜನಗರ ಜಿಲ್ಲೆಯ ಯಳಂದೂರು, ಕೊಳ್ಳೇಗಾಲ, ಹನೂರು, ಗುಂಡ್ಲುಪೇಟೆ, ಚಾಮರಾಜನಗರ ತಾಲೂಕುಗಳ ಖಾಸಗಿ ಕ್ಲಿನಿಕ್ ಗಳು ಬಂದ್ ನಡೆಸಿವೆ.

ಹುಬ್ಬಳ್ಳಿ :  ಖಾಸಗಿ ಆಸ್ಪತ್ರೆಗಳು, ವೈದ್ಯರ  ನಿಯಂತ್ರಣಕ್ಕೆ ಸರ್ಕಾರದ ನೂತನ ಕಾಯಿದೆ ರಚನೆ ಹಿನ್ನೆಲೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿಯೂ ಖಾಸಗಿ ವೈದ್ಯರು  ಪ್ರತಿಭಟನೆ ನಡೆಸಿದರು.  ವೈದ್ಯರು ಸೇವೆಗೆ ಗೈರಾಗಿದ್ದು, ಪ್ರತಿಭಟನೆಗೆ ನಡೆಸುತ್ತಿದ್ದಾರೆ. ಬಂದ್ ಬಗ್ಗೆ ಆಸ್ಪತ್ರೆಗಳ ಮುಂದೆ ಫಲಕ  ಇಳಿಬಿಡಲಾಗಿದ್ದು, ಆಸ್ಪತ್ರೆಗಳಿಗೆ ಬಂದ ರೋಗಿಗಳು ವಾಪಸ್ಸು ಮರಳುತ್ತಿದ್ದಾರೆ. (ಕೆ.ಎಸ್,ಎಸ್.ಎಚ್)

 

 

 

Leave a Reply

comments

Related Articles

error: